‘ಪರೀಕ್ಷಾ ಪೆ ಚರ್ಚಾ’ ವಿಡಿಯೊದಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಶ್ಲಾಘಿಸಿದ ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆ (Photo credit: instagram)
ಹೊಸದಿಲ್ಲಿ: ಇತ್ತೀಚಿನ ‘ಪರೀಕ್ಷಾ ಪೆ ಚರ್ಚಾ’ ಸಂಚಿಕೆಯಲ್ಲಿ ಭಾಗವಹಿಸಿದ್ದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಪ್ರಧಾನಿ ನರೇಂದ್ರ ಮೋದಿಯನ್ನು ಪ್ರಶಂಸಿಸಿದ್ದು, ಅವರ ಪಾಠಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡಿದ್ದಾರೆ.
‘ಪರೀಕ್ಷಾ ಪೆ ಚರ್ಚಾ’ ಸಂಚಿಕೆಯಲ್ಲಿ ಹಲವು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ದೀಪಿಕಾ ಪಡುಕೋಣೆ, ತಮ್ಮ ಶಾಲಾ ದಿನಗಳ ಅನುಭವಗಳನ್ನು ಮುಕ್ತವಾಗಿ ಹಂಚಿಕೊಂಡರು. ಈ ಸಂಚಿಕೆಯ ತುಣುಕೊಂದನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಅವರು, ತಮಗೆ ‘ಪರೀಕ್ಷಾ ಪೆ ಚರ್ಚಾ’ ಸಂಚಿಕೆಯಲ್ಲಿ ಭಾಗವಹಿಸುವ ಅವಕಾಶ ನೀಡಿದ ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಆ ವಿಡಿಯೊದಲ್ಲಿ, “ನಾನು ಶಾಲಾ ದಿನಗಳಲ್ಲಿ ತುಂಬಾ ತುಂಟಿಯಾಗಿದ್ದೆ. ಸೋಫಾಗಳು, ಮೇಜುಗಳು ಹಾಗೂ ಕುರ್ಚಿಗಳ ಸುತ್ತಮುತ್ತ ಜಿಗಿದಾಡುತ್ತಿದ್ದೆ. ಇದರೊಂದಿಗೆ ತುಂಬಾ ಒತ್ತಡಕ್ಕೂ ಒಳಗಾಗುತ್ತಿದ್ದೆ. ನಾನು ಗಣಿತದಲ್ಲಿ ತುಂಬಾ ದುರ್ಬಲೆಯಾಗಿದ್ದೆ ಹಾಗೂ ಈಗಲೂ ದುರ್ಬಲಳಾಗಿದ್ದೇನೆ. ನರೇಂದ್ರ ಮೋದಿ ಕೂಡಾ ನಿಮ್ಮ ಭಾವನೆಗಳನ್ನು ಹತ್ತಿಕ್ಕುವ ಬದಲು ವ್ಯಕ್ತಪಡಿಸಿ ಎಂದು ತಮ್ಮ ಪುಸ್ತಕದಲ್ಲಿ ಹೇಳಿದ್ದಾರೆ. ಹೀಗಾಗಿ, ನಿಮ್ಮ ಸ್ನೇಹಿತರು, ಕುಟುಂಬ, ಪೋಷಕರು, ಶಿಕ್ಷಕರು ಅಥವಾ ಯಾರೇ ಆಗಿರಲಿ, ಅವರ ಬಳಿ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಿ. ನಿಮ್ಮನ್ನು ನೀವು ವ್ಯಕ್ತಪಡಿಸಿಕೊಳ್ಳ,ಲು ಬರವಣಿಗೆ ಅದ್ಭುತ ಮಾರ್ಗವಾಗಿದೆ” ಎಂದು ಹಲವು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಿರುವ ದೀಪಿಕಾ ಪಡುಕೋಣೆ ಹೇಳುತ್ತಿರುವುದನ್ನು ನೋಡಬಹುದಾಗಿದೆ.