ತೀವ್ರ ಕಳವಳಕಾರಿ: ಚುನಾವಣಾ ಆಯುಕ್ತರ ರಾಜೀನಾಮೆಗೆ ಕಾಂಗ್ರೆಸ್ ಪ್ರತಿಕ್ರಿಯೆ
ಅರುಣ್ ಗೋಯಲ್ (Photo: NDTV)
ಹೊಸದಿಲ್ಲಿ: ಚುನಾವಣಾ ಆಯುಕ್ತ ಅರುಣ್ ಗೋಯಲ್ ಶನಿವಾರ ರಾಜೀನಾಮೆ ನೀಡುವ ಮೂಲಕ ಮೂವರು ಸದಸ್ಯರ ಆಯೋಗದ ಸದಸ್ಯಬಲ ಒಂದಕ್ಕೆ ಕುಸಿದಿದೆ. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮಾತ್ರವೇ ಇದೀಗ ಆಯೋಗದಲ್ಲಿ ಉಳಿದಿದ್ದಾರೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲೇ ಈ ಬೆಳವಣಿಗೆ ನಡದಿದ್ದು, ವಿರೋಧ ಪಕ್ಷಗಳು ಗೋಯಲ್ ರಾಜೀನಾಮೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿವೆ.
ಈ ಬೆಳವಣಿಗೆ ತೀವ್ರ ಕಳವಳಕಾರಿ ಎಂದು ಬಣ್ಣಿಸಿರುವ ಕಾಂಗ್ರೆಸ್ ಪಕ್ಷ ಇದಕ್ಕೆ ತಾರ್ತಿಕ ವಿವರಣೆಯನ್ನು ಸರ್ಕಾರ ನೀಡಬೇಕು ಎಂದು ಆಗ್ರಹಿಸಿದೆ.
"ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾಗುತ್ತಿದ್ದರೂ, ಭಾರತದಲ್ಲಿ ಇದೀಗ ಒಬ್ಬರು ಮಾತ್ರ ಚುನಾವಣಾ ಆಯುಕ್ತರು ಇದ್ದಾರೆ. ಏಕೆ? ನಾನು ಈ ಮೊದಲೇ ಹೇಳಿದಂತೆ, ಸ್ವತಂತ್ರ ಸಂಸ್ಥೆಗಳನ್ನು ವ್ಯವಸ್ಥಿತವಾಗಿ ದಮನಿಸುವುದನ್ನು ನಿಲ್ಲಿಸದಿದ್ದರೆ, ನಮ್ಮ ಪ್ರಜಾಪ್ರಭುತ್ವದ ಬದಲು ಸರ್ವಾಧಿಕಾರತ್ವ ಜಾರಿಯಾಗುತ್ತದೆ" ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಚ್ಚರಿಸಿದ್ದಾರೆ.
ಪತನಗೊಂಡಿರುವ ಸಂವಿಧಾನಾತ್ಮಕ ಸಂಸ್ಥೆಗಳ ಪೈಕಿ ಚುನಾವಣಾ ಆಯೋಗ ಇತ್ತೀಚಿನದು ಎಂದು ಅವರು ಹೇಳಿದ್ದಾರೆ. "ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡುವ ಹೊಸ ಪ್ರಕ್ರಿಯೆಯ ಎಲ್ಲ ಅಧಿಕಾರವನ್ನು ಆಡಳಿತ ಪಕ್ಷ ಮತ್ತು ಪ್ರಧಾನಿಗೆ ನೀಡಿದ್ದರೂ, ಅಧಿಕಾರಾವಧಿ ಮುಕ್ತಾಯವಾದ 23 ದಿನಗಳ ಬಳಿಕವೂ ಏಕೆ ನೇಮಕ ಮಾಡಿಲ್ಲ. ಮೋದಿಯವರು ಈ ಪ್ರಶ್ನೆಗಳಿಗೆ ಉತ್ತರಿಸಬೇಕು ಮತ್ತು ತಾರ್ಕಿಕ ವಿವರಣೆ ನೀಡಬೇಕು" ಎಂದು ಆಗ್ರಹಿಸಿದ್ದಾರೆ.
ತೃಣಮೂಲ ಕಾಂಗ್ರೆಸ್ ಸಂಸದ ಸಾಕೇತ್ ಗೋಖಲೆ ಕೂಡಾ ಈ ಬೆಳವಣಿಗೆಯನ್ನು ತೀರಾ ಕಳವಳಕಾರಿ ಎಂದು ಬಣ್ಣಿಸಿದ್ದಾರೆ.