ರಾಜ್ ದೀಪ್ ಸರ್ದೇಸಾಯಿ ವಿರುದ್ಧದ ಮಾನನಷ್ಟ ಪ್ರಕರಣ: ಅರ್ಜಿಯಲ್ಲಿ ಸತ್ಯ ಮರೆಮಾಚಿದ್ದಕ್ಕೆ ಬಿಜೆಪಿ ನಾಯಕಿಗೆ 25,000 ರೂ. ದಂಡ ವಿಧಿಸಿದ ಹೈಕೋರ್ಟ್

ರಾಜ್ ದೀಪ್ ಸರ್ದೇಸಾಯಿ | PC : PTI
ಹೊಸದಿಲ್ಲಿ: ಹಿರಿಯ ಪತ್ರಕರ್ತ ರಾಜ್ ದೀಪ್ ಸರ್ದೇಸಾಯಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ತನ್ನನ್ನು ಅಪಮಾನಗೊಳಿಸಲಾಗಿದೆ ಹಾಗೂ ನನ್ನ ಖಾಸಗಿತನವನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಬಿಜೆಪಿ ನಾಯಕಿ ಶಾಝಿಯಾ ಇಲ್ಮಿ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಸಂಪೂರ್ಣ ವಾಸ್ತವಗಳನ್ನು ಉದ್ದೇಶಪೂರ್ವಕವಾಗಿ ಮರೆ ಮಾಚಲಾಗಿದೆ ಎಂದು ಶುಕ್ರವಾರ ಅಭಿಪ್ರಾಯಪಟ್ಟಿರುವ ದಿಲ್ಲಿ ಹೈಕೋರ್ಟ್, ಅವರಿಗೆ 25 ಸಾವಿರ ರೂ. ದಂಡ ವಿಧಿಸಿದೆ.
ಶಾಝಿಯಾ ಇಲ್ಮಿಯ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಮನ್ಮೀತ್ ಪ್ರೀತಂ ಸಿಂಗ್ ಅರೋರಾ, ನೇರ ಪ್ರಸಾರದ ಚರ್ಚೆಯಿಂದ ಹಿಂದೆ ಸರಿದು, ಕಾರ್ಯಕ್ರಮದ ಚಿತ್ರೀಕರಣದಿಂದ ಇಲ್ಮಿ ಹೊರ ನಡೆಯುವಾಗ, ಆಕೆಯ ಖಾಸಗಿತನಕ್ಕೆ ಧಕ್ಕೆಯಾಗಿದೆ ಎಂದೂ ಅಭಿಪ್ರಾಯ ಪಟ್ಟಿದ್ದಾರೆ.
ಅಗ್ನಿವೀರ್ ಯೋಜನೆಯ ಕುರಿತು ಜುಲೈ 2024ರಲ್ಲಿ ಸುದ್ದಿ ವಾಹಿನಿಯೊಂದರಲ್ಲಿ ರಾಜ್ ದೀಪ್ ಸರ್ದೇಸಾಯಿ ಚರ್ಚೆಯನ್ನು ಹಮ್ಮಿಕೊಂಡಿದ್ದಾಗ ಈ ವಿವಾದ ಭುಗಿಲೆದ್ದಿತ್ತು. ರಾಜ್ ದೀಪ್ ಸರ್ದೇಸಾಯಿ ಹಾಗೂ ಶಾಝಿಯಾ ಇಲ್ಮಿ ನಡುವೆ ಕೆಲವು ತೀಕ್ಷ್ಣ ಮಾತಿನ ಚಕಮಕಿ ನಡೆದ ನಂತರ, ಕಾರ್ಯಕ್ರಮದ ಮಧ್ಯದಲ್ಲೇ ಇಲ್ಮಿ ನಿರ್ಗಮಿಸಿದ್ದರು.
ನಂತರ, ಹಿರಿಯ ಪತ್ರಕರ್ತರಾದ ರಾಜ್ ದೀಪ್ ಸರ್ದೇಸಾಯಿ ಅವರು ಎಕ್ಸ್ ನಲ್ಲಿ ಹಂಚಿಕೊಂಡಿದ್ದ ಪೋಸ್ಟ್ ಹಾಗೂ ವಿಡಿಯೊವೊಂದು ಆಕ್ಷೇಪಾರ್ಹವಾಗಿದ್ದು, ನನ್ನ ಖಾಸಗಿತನಕ್ಕೆ ಧಕ್ಕೆಯಾಗಿದೆ ಎಂದು ಶಾಝಿಯಾ ಇಲ್ಮಿ ಆರೋಪಿಸಿದ್ದರು.
“ಕಾರ್ಯಕ್ರಮ ಮುಕ್ತಾಯಗೊಂಡಿತ್ತು. ಅದಕ್ಕೆ ನಾನು ನೀಡಿದ್ದ ಸಮ್ಮತಿಯೂ ಮುಕ್ತಾಯಗೊಂಡಿತ್ತು. ಇದಾದ ನಂತರ, ನನ್ನ ಸಮ್ಮತಿಯಿಲ್ಲದೆ ನನ್ನ ವೈಯಕ್ತಿಕ ಕಾಲಾವಧಿಯನ್ನು ಚಿತ್ರೀಕರಿಸುವಂತಿಲ್ಲ” ಎಂದು ತಮ್ಮ ವಕೀಲರ ಮೂಲಕ ಇಲ್ಮಿ ವಾದ ಮಂಡಿಸಿದರು.
ಈ ವೇಳೆ, ಇಲ್ಮಿಯ ಸಮ್ಮತಿಯಿಲ್ಲದೆ ಕಾರ್ಯಕ್ರಮದ ನಿರೂಪಕರಾಗಿದ್ದ ರಾಜ್ ದೀಪ್ ಸರ್ದೇಸಾಯಿ ಹಾಗೂ ಆ ಕಾರ್ಯಕ್ರಮವನ್ನು ಪ್ರಸಾರ ಮಾಡಿದ್ದ ಸುದ್ದಿ ವಾಹಿನಿಯು ಅವರ ಖಾಸಗಿ ಅವಧಿಯನ್ನು ಚಿತ್ರೀಕರಿಸಬಾರದಿತ್ತು ಅಥವಾ ಆ ವಿಡಿಯೊದ ಭಾಗವೊಂದನ್ನು ಬಳಸಿಕೊಳ್ಳಬಾರದಿತ್ತು ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.
ಹೀಗಿದ್ದೂ, ನಾನು ಮೈಕ್ರೋಫೋನ್ ಅನ್ನು ತೆಗೆದು ಹಾಕುವುದನ್ನು ಚಿತ್ರೀಕರಿಸಿರುವುದರಿಂದ, ನನ್ನ ಘನತೆಗೆ ಕುಂದುಂಟಾಗಿದೆ ಅಥವಾ ನನ್ನ ಖಾಸಗಿತನಕ್ಕೆ ಧಕ್ಕೆ ತಂದಿದೆ ಎಂಬ ಇಲ್ಮಿಯ ವಾದವು ತಪ್ಪು ಗ್ರಹಿಕೆ ಹಾಗೂ ಘಟನೆಯ ನಂತರದ ಯೋಚನೆಯಾಗಿದೆ ಎಂದೂ ಆದೇಶದಲ್ಲಿ ಹೇಳಲಾಗಿದೆ.