ಮಾನಹಾನಿ ಪ್ರಕರಣ: ರಾಹುಲ್ ಗಾಂಧಿ ಹಾಜರಾತಿಗೆ ಪುಣೆ ನ್ಯಾಯಾಲಯ ಸೂಚನೆ
ರಾಹುಲ್ ಗಾಂಧಿ | PC : PTI
ಪುಣೆ: ವಿ.ಡಿ. ಸಾವರ್ಕರ್ ಅವರಿಗೆ ಅವಮಾನಿಸಲಾಗಿದೆ ಎಂದು ಅವರ ಮರಿ ಮೊಮ್ಮಗ ಸತ್ಯಕಿ ಸಾವರ್ಕರ್ ದಾಖಲಿಸಿದ್ದ ಮಾನಹಾನಿ ಪ್ರಕರಣದಲ್ಲಿ ತನ್ನೆದುರು ಹಾಜರಾಗುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಪುಣೆಯ ನ್ಯಾಯಾಲಯವೊಂದು ಸೂಚಿಸಿದೆ.
ವಿಚಾರಣೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಪರ ಯಾವುದೇ ವಕೀಲರು ಉಪಸ್ಥಿತರಿಲ್ಲದೆ ಇದ್ದುದರಿಂದ, ವಿಸ್ತೃತ ಆದೇಶವು ಇನ್ನಷ್ಟೆ ಲಭ್ಯವಾಗಬೇಕಿದೆ.
ಈ ಆದೇಶವನ್ನು ಜುಡಿಷಿಯಲ್ ಮ್ಯಾಜಿಸ್ಟ್ರೇಟ್ (ಪ್ರಥಮ ದರ್ಜೆ) ಅಕ್ಷಿ ಜೈನ್ ಹೊರಡಿಸಿದ್ದಾರೆ.
ಅರ್ಜಿದಾರ ಸತ್ಯಕಿ ಸಾವರ್ಕರ್ ಅವರು ಸಲ್ಲಿಸಿರುವ ದೂರಿನಲ್ಲಿ ಮೇಲ್ನೋಟದ ಸತ್ಯಾಂಶವಿದೆ ಎಂದು ಪುಣೆಯ ಪೊಲೀಸರು ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಸಿದ ಎರಡು ದಿನಗಳ ನಂತರ ಈ ಆದೇಶ ಹೊರ ಬಿದ್ದಿದೆ. ರಾಹುಲ್ ಗಾಂಧಿಯವರು 2023ರಲ್ಲಿ ಲಂಡನ್ ನಲ್ಲಿ ಮಾಡಿದ್ದ ಭಾಷಣವೊಂದರಲ್ಲಿ ಸಾವರ್ಕರ್ ಅವರ ಹೆಸರಿಗೆ ಮಸಿ ಬಳಿದಿದ್ದರು ಎಂದು ಸತ್ಯಕಿ ಸಾವರ್ಕರ್ ಆರೋಪಿಸಿದ್ದರು.
ಲಂಡನ್ ನ ಕಾರ್ಯಕ್ರಮವೊಂದರ ಭಾಷಣದಲ್ಲಿ, ಸಾವರ್ಕರ್ ತಮ್ಮ ಕೃತಿಯೊಂದರಲ್ಲಿ "ನಾನು ಹಾಗೂ ನನ್ನ ಸ್ನೇಹಿತರು ಸೇರಿಕೊಂಡು ಮುಸ್ಲಿಂ ವ್ಯಕ್ತಿಯನ್ನು ಥಳಿಸಿದ್ದೆವು ಹಾಗೂ ಅದರಿಂದ ನಮಗೆ ಸಂತೋಷವಾಗಿತ್ತು" ಎಂದು ಬರೆದಿದ್ದಾರೆ ಎಂದು ಹೇಳಿದ್ದರು.
ಆದರೆ, ಈ ಹೇಳಿಕೆಯನ್ನು ಆಕ್ಷೇಪಿಸಿದ್ದ ಸತ್ಯಕಿ ಸಾವರ್ಕರ್, ಅಂತಹ ಯಾವುದೇ ಘಟನೆ ಎಲ್ಲಿಯೂ ನಡೆದಿಲ್ಲ ಹಾಗೂ ವಿ.ಡಿ.ಸಾವರ್ಕರ್ ಕೂಡಾ ಅಂತಹ ಯಾವುದೇ ಘಟನೆಯನ್ನು ತಮ್ಮ ಕೃತಿಯಲ್ಲಿ ನಮೂದಿಸಿಲ್ಲ ಎಂದು ದೂರು ಸಲ್ಲಿಸಿದ್ದರು.
ಈ ಪ್ರಕರಣದ ಮುಂದಿನ ವಿಚಾರಣೆ ಆಗಸ್ಟ್ 19, 2024ರಂದು ನಿಗದಿಯಾಗಿದ್ದು, ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಖುದ್ದು ಹಾಜರಾಗಬೇಕೊ ಅಥವಾ ತಮ್ಮ ವಕೀಲರ ಮೂಲಕ ಹಾಜರಾಗಬೇಕೊ ಎಂಬುದಿನ್ನೂ ಸ್ಪಷ್ಟವಾಗಿಲ್ಲ.