ಮಾನನಷ್ಟ ಮೊಕದ್ದಮೆ ರಾಹುಲ್ ಗಾಂಧಿಗೆ ಸಮನ್ಸ್
ರಾಹುಲ್ ಗಾಂಧಿ | Photo: PTI
ರಾಂಚಿ: ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ‘ಕೊಲೆ ಆರೋಪಿ’ ಎಂದು ಕರೆದಿರುವುದಕ್ಕಾಗಿ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿ ಮಾರ್ಚ್ 27ರಂದು ಖುದ್ದು ಹಾಜರಾಗುವಂತೆ ಚೈಬಾಸಾದ ಎಂಪಿ-ಎಂಎಲ್ಎ ನ್ಯಾಯಾಲಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಮಂಗಳವಾರ ಸಮನ್ಸ್ ಜಾರಿ ಮಾಡಿದೆ.
ತನ್ನ ವಿರುದ್ಧ ದಾಖಲಾದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಯನ್ನು ರದ್ದುಗೊಳಿಸುವಂತೆ ಕೋರಿ ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ಜಾರ್ಖಂಡ್ ಉಚ್ಛ ನ್ಯಾಯಾಲಯ ವಜಾಗೊಳಿಸಿದ ಕೆಲವೇ ದಿನಗಳ ಬಳಿಕ ಎಂಪಿ-ಎಂಎಲ್ಎ ನ್ಯಾಯಾಲಯ ಈ ಸಮನ್ಸ್ ನೀಡಿದೆ.
ಇದಕ್ಕೂ ಮೊದಲು ರಾಹುಲ್ ಗಾಂಧಿ ಅವರು ಚೈಬಾಸಾದ ಎಂಪಿ-ಎಂಎಲ್ಎ ನ್ಯಾಯಾಲಯ ಫೆಬ್ರವರಿ 27ರಂದು ನೀಡಿದ ಆದೇಶದ ವಿರುದ್ಧ ಖುದ್ದು ಹಾಜರಾತಿಯಿಂದ ವಿನಾಯತಿ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ಅದನ್ನು ನ್ಯಾಯಾಲಯ ಮಾರ್ಚ್ 14ರಂದು ತಿರಸ್ಕರಿಸಿತ್ತು. ಅಲ್ಲದೆ, ತನ್ನ ಹಿಂದಿನ ಆದೇಶವನ್ನು ಎತ್ತಿಹಿಡಿಯಿತು ಹಾಗೂ ಮಾರ್ಚ್ 21ರಂದು ಖುದ್ದಾಗಿ ಹಾಜರಾಗುವಂತೆ ರಾಹುಲ್ ಗಾಂಧಿ ಅವರಿಗೆ ಸೂಚಿಸಿತ್ತು.
ಹೊಸದಿಲ್ಲಿಯಲ್ಲಿ 2018 ಮಾರ್ಚ್ 18ರಂದು ನಡೆದ ಎಐಸಿಸಿಯ ಮಹಾ ಅಧಿವೇಶನದಲ್ಲಿ ರಾಹುಲ್ ಗಾಂಧಿ ಅವರು, ಅಧಿಕಾರದ ಅಮಲಿನಲ್ಲಿರುವ ಸುಳ್ಳುಗಾರ ಬಿಜೆಪಿ ನಾಯಕತ್ವವನ್ನು ಜನರು ಸ್ವೀಕರಿಸಿದ್ದಾರೆ. ಆದರೆ, ಬಿಜೆಪಿಯನ್ನು ಯಾವುದಕ್ಕಾಗಿ ರೂಪಿಸಲಾಗಿದೆ ಎಂಬುದು ಜನರಿಗೆ ತಿಳಿದಿದೆ ಎಂದಿದ್ದರು.
ಅಲ್ಲದೆ, ‘‘ಕೊಲೆ ಆರೋಪಿ ವ್ಯಕ್ತಿ ಬಿಜೆಪಿಯ ಅಧ್ಯಕ್ಷರಾಗುವುದನ್ನು ಅವರು ಸ್ವೀಕರಿಸಬಹುದು. ಆದರೆ, ಕಾಂಗ್ರೆಸ್ ಪಕ್ಷದಲ್ಲಿ ಅಂತಹ ವ್ಯಕ್ತಿಯನ್ನು ಎಂದಿಗೂ ಸ್ವೀಕರಿಸಲಾರರು”, ಎಂದಿದ್ದರು.