ಕಾಂಗ್ರೆಸ್ ನಾಯಕರ ವಿರುದ್ಧ ಮಾನಹಾನಿಕರ ಹೇಳಿಕೆ | ಬಿ ಆರ್ ಎಸ್ ಪಕ್ಷದ ಚಂದ್ರಶೇಖರ್ ರಾವ್ ಗೆ ಚುನಾವಣಾ ಆಯೋಗದಿಂದ ನೋಟಿಸ್
ಕೆ. ಚಂದ್ರಶೇಖರ್| PC : PTI
ಅಮರಾವತಿ: ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ಆರೋಪದಲ್ಲಿ ಭಾರತ್ ರಾಷ್ಟ್ರ ಸಮಿತಿ ವರಿಷ್ಠ ಕೆ. ಚಂದ್ರಶೇಖರ್ ರಾವ್ ಅವರಿಗೆ ಚುನಾವಣಾ ಆಯೋಗ ಮಂಗಳವಾರ ನೋಟಿಸು ಜಾರಿ ಮಾಡಿದೆ.
ಚಂದ್ರಶೇಖರ್ ರಾವ್ ಅವರು ಎಪ್ರಿಲ್ 5ರಂದು ಕಾಂಗ್ರೆಸ್ ನಾಯಕರ ವಿರುದ್ಧ ಮಾನಹಾನಿಕರ ಹೇಳಿಕೆ ನೀಡುವ ಮೂಲಕ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಅವರಿಗೆ ನೋಟಿಸು ಜಾರಿ ಮಾಡಿದೆ.
ಮಾನಹಾನಿಕರ ಹೇಳಿಕೆ ಆರೋಪದ ಕುರಿತಂತೆ ಗುರುವಾರ ಬೆಳಗ್ಗೆ 11 ಗಂಟೆಯ ಒಳಗಡೆ ವಿವರಣೆ ನೀಡುವಂತೆ ಚುನಾವಣಾ ಆಯೋಗ ರಾವ್ ಅವರಿಗೆ ಆದೇಶಿಸಿದೆ. ಇದಕ್ಕೆ ವಿಫಲವಾದರೆ, ಈ ವಿಷಯದ ಕುರಿತು ನಿಮಗೆ ಹೇಳಲು ಏನೂ ಇಲ್ಲ ಎಂದು ಊಹಿಸಲಾಗುವುದು ಹಾಗೂ ಈ ವಿಷಯದ ಕುರಿತು ಸೂಕ್ತ ಕ್ರಮ ಅಥವಾ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಆಯೋಗ ಹೇಳಿದೆ.
ಸಿರ್ಸಿಲ್ಲಾದಲ್ಲಿ ಎಪ್ರಿಲ್ 5ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಚಂದ್ರಶೇಖರ್ ರಾವ್ ಅವರು ಕಾಂಗ್ರೆಸ್ ನಾಯಕರ ವಿರುದ್ಧ ಅಸಭ್ಯ, ಮಾನಹಾನಿಕರ ಹಾಗೂ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ನಾಯಕ ಜಿ. ನಿರಂಜನ್ ಅವರು ಸಲ್ಲಿಸಿದ ದೂರಿನ ಕುರಿತಂತೆ ತೆಲಂಗಾಣ ಮುಖ್ಯ ಚುನಾವಣಾ ಅಧಿಕಾರಿ ವರದಿ ಸಲ್ಲಿಸಿದ ಬಳಿಕ ಈ ನೋಟಿಸು ನೀಡಲಾಗಿದೆ.