ಆಧ್ಯಾತ್ಮಿಕ ಗುರು ವಿರುದ್ಧ ಮಾನಹಾನಿಕರ ವೀಡಿಯೊ | ಗೂಗಲ್ ಸಿಇಒ ಸುಂದರ ಪಿಚೈಗೆ ನ್ಯಾಯಾಂಗ ನಿಂದನೆ ನೋಟಿಸ್

ಗೂಗಲ್ ಸಿಇಒ ಸುಂದರ್ ಪಿಚೈ | PC : X \ @sundarpichai
ಮುಂಬೈ : ಆಧ್ಯಾತ್ಮಿಕ ಗುರುವೋರ್ವರ ವಿರುದ್ಧ ಯೂಟ್ಯೂಬ್ನಲ್ಲಿ ಪೋಸ್ಟ್ ಮಾಡಲಾದ ಮಾನಹಾನಿಕರ ವೀಡಿಯೊ ಗೆ ಸಂಬಂಧಿಸಿದಂತೆ ಮುಂಬೈನ ಬಲ್ಲಾರ್ಡ್ ಪಿಯರ್ ನ್ಯಾಯಾಲಯವು ಗೂಗಲ್ನ ಸಿಇಒ ಸುಂದರ ಪಿಚೈ ಅವರಿಗೆ ನ್ಯಾಯಾಂಗ ನಿಂದನೆ ನೋಟಿಸ್ನ್ನು ಹೊರಡಿಸಿದೆ.
ಎನ್ಜಿಒ ಧ್ಯಾನ ಫೌಂಡೇಷನ್ ಮತ್ತು ಆಧ್ಯಾತ್ಮಿಕ ನಾಯಕ ಯೋಗಿ ಅಶ್ವಿನಿ ಅವರನ್ನು ಗುರಿಯಾಗಿಸಿಕೊಂಡಿರುವ ‘ಪಾಖಂಡಿ ಬಾಬಾ ಕೀ ಕರ್ತೂತ್’ ಶೀರ್ಷಿಕೆಯ ವೀಡಿಯೊವನ್ನು ತೆಗೆಯುವಂತೆ ಬಾಂಬೆ ಉಚ್ಛ ನ್ಯಾಯಾಲಯವು 2024, ಮಾ.31ರಂದು ಯೂಟ್ಯೂಬ್ಗೆ ಆದೇಶಿಸಿತ್ತು. ಆದೇಶವನ್ನು ಪಾಲಿಸುವಲ್ಲಿ ಗೂಗಲ್ ವಿಫಲಗೊಂಡ ಬಳಿಕ ಇಲ್ಲಿಯ ಬಲ್ಲಾರ್ಡ್ ಪಿಯರ್ನ ಹೆಚ್ಚುವರಿ ಮುಖ್ಯಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ನ.21ರಂದು ಈ ನೋಟಿಸ್ ಹೊರಡಿಸಿದೆ.
ವೀಡಿಯೊದಲ್ಲಿ ಮಾನಹಾನಿಕರ ಮತ್ತು ಅಶ್ಲೀಲ ವಿಷಯಗಳಿವೆ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಅದರ ವ್ಯಾಪಕ ಪ್ರಸಾರವು ಧ್ಯಾನ್ ಫೌಂಡೇಷನ್ ಮತ್ತು ಯೋಗಿ ಅಶ್ವಿನಿ ಅವರ ವರ್ಚಸ್ಸಿಗೆ ಹಾನಿಯನ್ನುಂಟು ಮಾಡಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
ಧ್ಯಾನ ಫೌಂಡೇಷನ್ ಕಳೆದ ವರ್ಷದ ಅಕ್ಟೋಬರ್ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿಯನ್ನು ಸಲ್ಲಿಸಿತ್ತಾದರೂ ಕಳೆದ ವಾರವಷ್ಟೇ ನೋಟಿಸ್ ಹೊರಡಿಸಲಾಗಿದೆ. ಈ ವೀಡಿಯೊವನ್ನು ತೆಗೆಯಲು ನ್ಯಾಯಾಲಯದ ಆದೇಶವಿದ್ದರೂ ಭಾರತದ ಹೊರಗೆ ಅದು ಲಭ್ಯವಿದೆ ಮತ್ತು ಗೂಗಲ್ ಅದನ್ನು ತೆಗೆಯಲು ಉದ್ದೇಶಪೂರ್ವಕವಾಗಿ ವಿಫಲಗೊಂಡಿದೆ ಎಂದು ಅರ್ಜಿಯು ಆರೋಪಿಸಿತ್ತು.
ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ತಾನು ವಿನಾಯಿತಿಯನ್ನು ಹೊಂದಿದ್ದೇನೆ ಎಂದು ವಾದಿಸಿದ್ದ ಯೂಟ್ಯೂಬ್, ವೀಡಿಯೊವನ್ನು ಕಾಯ್ದೆಯ ಕಲಂ 69-ಎ ಅಡಿ ನಿರ್ಬಂಧಿಸಬಹುದಾದ ವಿಷಯಗಳ ವರ್ಗದಲ್ಲಿ ಬರುವುದಿಲ್ಲ ಎಂದು ಹೇಳಿತ್ತು. ಆದರೆ ಇದನ್ನು ತಿರಸ್ಕರಿಸಿದ ನ್ಯಾಯಾಲಯವು,ಇಂತಹ ವಿಷಯಗಳಲ್ಲಿ ಕ್ರಿಮಿನಲ್ ನ್ಯಾಯಾಲಯಗಳು ಮಧ್ಯ ಪ್ರವೇಶಿಸುವುದನ್ನು ಮಾಹಿತಿ ತಂತ್ರಜ್ಞಾನ ಕಾಯ್ದೆಯು ತಡೆಯುವುದಿಲ್ಲ ಎಂದು ತಿಳಿಸಿತ್ತು.