ಮಧ್ಯಂತರ ಬಜೆಟ್ ನಲ್ಲಿ ರಕ್ಷಣೆಗೆ ಸಿಂಹಾಪಾಲು; ಕೃಷಿಗೆ ಕನಿಷ್ಠ
Photo: PTI
ಹೊಸದಿಲ್ಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಮಂಡಿಸಿದ 2024-25ನೇ ಸಾಲಿನ ಮಧ್ಯಂತರ ಬಜೆಟ್ನಲ್ಲಿ ರಕ್ಷಣಾ ಇಲಾಖೆಯು ಸಿಂಹಪಾಲು ಪಡೆದಿದ್ದು, 6.2 ಲಕ್ಷ ಕೋಟಿ ಅನುದಾನವನ್ನು ಘೋಷಿಸಲಾಗಿದೆ. ಇನೊಂದೆಡೆ ಕೃಷಿ ಹಾಗೂ ರೈತರ ಕಲ್ಯಾಣ ಸಚಿವಾಲಯಕ್ಕೆ 1.26 ಲಕ್ಷ ಕೋಟಿ ರೂ. ದೊರೆತಿದ್ದು, ಇತರ ಪ್ರಮುಖ ವಲಯಗಳಿಗೆ ಹೋಲಿಸಿದರೆ ಇದು ಅತ್ಯಂತ ಕನಿಷ್ಠ ಅನುದಾನವಾಗಿದೆ.
ರಕ್ಷಣಾ ಸಚಿವಾಲಯದ ಆನಂತರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯವು ಅತ್ಯಧಿಕ ಅನುದಾನವನ್ನು ಪಡೆದುಕೊಂಡಿದ್ದು, ಅದಕ್ಕೆ 2.55 ಲಕ್ಷ ಕೋಟಿ ರೂ. ನೀಡಲಾಗಿದೆ.
ಸೌರಶಕ್ತಿ ವಲಯದಲ್ಲಿ ಖಾಸಗಿ ಹೂಡಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ 1 ಲಕ್ಷ ಕೋಟಿ ರೂ.ಗಳ ಕಾರ್ಪಸ್ ನಿಧಿಯನ್ನು ಸೃಷ್ಟಿಸುವ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯನ್ನು ಕೂಡಾ ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದಾರೆ. ಈ ಕಾರ್ಪಸ್ ನಿಧಿಯೊಂದಿಗೆ, ದೇಶದ ತಂತ್ರಜ್ಞಾನ ಪರಿಣಿತ ಯುವಜನಾಂಗಕ್ಕೆ ಸುವರ್ಣ ಯುಗವು ಆರಂಭವಾಗಲಿದೆ ಎಂದು ಸಚಿವೆ ಬಣ್ಣಿಸಿದರು.
ಈ ಕಾರ್ಪಸ್ ನಿಧಿಯ ಮೂಲಕ 50 ವರ್ಷಗಳ ಈ ಬಡ್ಡಿರಹಿತ ಸಾಲ ಯೋಜನೆಯನ್ನು ಸೃಷ್ಟಿಸಲಾಗುವುದು. ಉದಯೋನ್ಮುಖ ತಂತ್ರಜ್ಞಾನ ವಲಯಗಳಲ್ಲಿ ಸಂಶೋಧನೆ ಹಾಗೂ ಅಧ್ಯಯನಕ್ಕೆ ಈ ಯೋಜನೆಯು ಗಣನೀಯವಾದ ಆರ್ಥಿಕ ನೆರವನ್ನು ನೀಡಲಿದೆ ಎಂದವರು ಹೇಳಿದರು.