ಶಿಂಧೆ ಗುಂಪಿನ ವಿರುದ್ಧ ಅನರ್ಹತೆ ಅರ್ಜಿಗಳ ನಿರ್ಧಾರದಲ್ಲಿ ವಿಳಂಬ: ಮಹಾರಾಷ್ಟ್ರ ಸ್ಪೀಕರ್ ಗೆ ಸುಪ್ರೀಂ ಕೋರ್ಟ್ ತರಾಟೆ
Photo : PTI
ಹೊಸದಿಲ್ಲಿ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಮತ್ತು ಅವರನ್ನು ಬೆಂಬಲಿಸುತ್ತಿರುವ ಶಿವಸೇನೆ ಶಾಸಕರ ವಿರುದ್ಧದ ಅನರ್ಹತೆ ಅರ್ಜಿಗಳ ಕುರಿತು ತೀರ್ಪನ್ನು ವಿಳಂಬಿಸುತ್ತಿರುವುದಕ್ಕಾಗಿ ಸುಪ್ರಿಂ ಕೋರ್ಟ್ ಶುಕ್ರವಾರ ರಾಜ್ಯ ವಿಧಾನಸಭಾ ಸ್ಪೀಕರ್ ರಾಹುಲ್ ನಾರ್ವೇಕರ್ ಅವರನ್ನು ತರಾಟೆಗೆ ತೆಗೆದುಕೊಂಡಿದೆ.
2022, ಜೂನ್ ನಲ್ಲಿ ಆಗ ಡೆಪ್ಯುಟಿ ಸ್ಪೀಕರ್ ಆಗಿದ್ದ ಎನ್ ಸಿ ಪಿ ನಾಯಕ ನರಹರಿ ಜಿರ್ವಾಲ್ ಅವರು ಈ ಶಾಸಕರ ವಿರುದ್ಧ ಅನರ್ಹತೆ ಪ್ರಕ್ರಿಯೆಯನ್ನು ಆರಂಭಿಸಿದ್ದರು. ಜಿರ್ವಾಲ್ ತಮಗೆ ಕಳುಹಿಸಿದ್ದ ಅನರ್ಹತೆ ನೋಟಿಸ್ ಗಳನ್ನು ಪ್ರಶ್ನಿಸಿ ಶಿಂಧೆ ಮತ್ತು ಅವರ ಬಣದ 15 ಶಾಸಕರು ಸುಪ್ರಿಂ ಕೋರ್ಟ್ ನಲ್ಲಿ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು. ನಂತರ ಶಿವಸೇನೆ (ಉದ್ಧವ ಬಾಳಾಸಾಹೇಬ ಠಾಕ್ರೆ) ಸಂಸದ ಸುನಿಲ ಪ್ರಭು ಅವರು ಪ್ರಕರಣಗಳ ತ್ವರಿತ ವಿಲೇವಾರಿಯನ್ನು ಕೋರಿ ಮಧ್ಯಂತರ ಅರ್ಜಿಯನ್ನು ದಾಖಲಿಸಿದ್ದರು.
ಸಮಂಜಸ ಗಡುವಿನೊಳಗೆ ಅನರ್ಹತೆ ಅರ್ಜಿಗಳ ವಿಚಾರಣೆಯನ್ನು ನಡೆಸುವಂತೆ ಮತ್ತು ತೀರ್ಮಾನವನ್ನು ಕೈಗೊಳ್ಳುವಂತೆ ಮೇ 11ರಂದು ಐವರು ನ್ಯಾಯಾಧೀಶರ ಪೀಠವು ಮಹಾರಾಷ್ಟ್ರ ಸ್ಪೀಕರ್ ಗೆ ನಿರ್ದೇಶನ ನೀಡಿತ್ತು.
ಸೆ.18ರಂದು ಸುಪ್ರಿಂ ಕೋರ್ಟ್ ಅರ್ಜಿಗಳನ್ನು ನಿರ್ಧರಿಸಲು ಅಗತ್ಯ ಸಮಯಾವಕಾಶವನ್ನು ತಿಳಿಸುವಂತೆ ಅವರಿಗೆ ಸೂಚಿಸಿತ್ತು.
ಶುಕ್ರವಾರದ ವಿಚಾರಣೆ ಸಂದರ್ಭ ಠಾಕ್ರೆ ಬಣದ ಪರ ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ಅಭಿಷೇಕ್ ಮನು ಸಿಂಘ್ವಿ ಅವರು, ನಾರ್ವೇಕರ್ ವಿಚಾರಣೆಗಾಗಿ ಒಂದು ವರ್ಷದ ವೇಳಾಪಟ್ಟಿಯನ್ನು ರೂಪಿಸಿದ್ದರು ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠಕ್ಕೆ ತಿಳಿಸಿದರು.
ಮುಂದಿನ ವಿಧಾನಸಭಾ ಚುನಾವಣೆಗೆ ಮುನ್ನ ಈ ವಿಷಯದಲ್ಲಿ ನಿರ್ಧಾರವನ್ನು ತೆಗೆದುಕೊಳ್ಳಬೇಕು, ಇಲ್ಲದಿದ್ದರೆ ಪ್ರಕ್ರಿಯೆಯು ನಿರರ್ಥಕವಾಗುತ್ತದೆ ಎಂದು ನ್ಯಾ.ಚಂದ್ರಚೂಡ್ ಹೇಳಿದರು.
ಅವರು (ನಾರ್ವೇಕರ್) ಸುಪ್ರಿಂ ಕೋರ್ಟ್ ಆದೇಶಗಳನ್ನು ಉಲ್ಲಂಘಿಸಲು ಸಾಧ್ಯವಿಲ್ಲ ಎಂದು ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರಿಗೆ ತಿಳಿಸಿದ ಮುಖ್ಯ ನ್ಯಾಯಮೂರ್ತಿಗಳು,‘ಯಾವ ರೀತಿಯ ವೇಳಾಪಟ್ಟಿಯನ್ನು ಅವರು ಸೂಚಿಸುತ್ತಿದ್ದಾರೆ? ಇದು ಸಂಕ್ಷಿಪ್ತ ಕಾರ್ಯವಿಧಾನವಾಗಿದೆ. ಅವರಲ್ಲಿ ಉತ್ತಮ ಪ್ರಜ್ಞೆಯು ಮೂಡುತ್ತದೆ ಎಂದು ಕಳೆದ ಬಾರಿ ಯೋಚಿಸಿದ್ದ ನಾವು ವೇಳಾಪಟ್ಟಿಯೊಂದನ್ನು ಮಂಡಿಸುವಂತೆ ಸೂಚಿಸಿದ್ದೆವು. ವೇಳಾಪಟ್ಟಿಯನ್ನು ರೂಪಿಸುವ ಪರಿಕಲ್ಪನೆಯು ವಿಚಾರಣೆಯನ್ನು ಅನಿರ್ದಿಷ್ಟ ಕಾಲ ವಿಳಂಬಿಸುವುದಲ್ಲ ’ ಎಂದರು. ಸಿಟ್ಟಾದಂತೆ ಕಂಡು ಬಂದ ಅವರು, ಪ್ರಕರಣವು ಪ್ರಹಸನವಾಗಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.
ಅನರ್ಹತೆ ಅರ್ಜಿಗಳ ಕುರಿತು ಎರಡು ತಿಂಗಳುಗಳಲ್ಲಿ ತೀರ್ಮಾನವನ್ನು ತೆಗೆದುಕೊಳ್ಳುವಂತೆ ಸ್ಪೀಕರ್ ಗೆ ತಾಕೀತು ಮಾಡಿದ ಸುಪ್ರಿಂ ಕೋರ್ಟ್ ವಿಚಾರಣೆಯನ್ನು ಅ.18ಕ್ಕೆ ಮುಂದೂಡಿತು. ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಪರಿಷ್ಕೃತ ವೇಳಾಪಟ್ಟಿಯನ್ನು ಸಲ್ಲಿಸುವಂತೆ ಅವರಿಗೆ ಸೂಚಿಸಿತು.