ಪ್ರಾರ್ಥನಾ ಸ್ಥಳಗಳ ಕಾಯ್ದೆ ಪ್ರಕರಣದಲ್ಲಿ ಪ್ರತಿಕ್ರಿಯೆ ವಿಳಂಬ ಕೇಂದ್ರದ ಉದ್ದೇಶಪೂರ್ವಕ ಕ್ರಮ: ಈದ್ಗಾ ಸಮಿತಿ

ಸಾಂದರ್ಭಿಕ ಚಿತ್ರ PC: PTI
ಹೊಸದಿಲ್ಲಿ: ಪ್ರಾರ್ಥನಾ ಸ್ಥಳಗಳ (ವಿಶೇಷ ಸಲಭ್ಯಗಳು) ಕಾಯ್ದೆಯ ಕ್ರಮಬದ್ಧತೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ವಿಳಂಬ ಮಾಡಬೇಕು ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿ ಪ್ರತಿಕ್ರಿಯೆಯನ್ನು ಸಲ್ಲಿಸುತ್ತಿಲ್ಲ ಎಂದು ಮಥುರಾದ ಶಾಹಿ ಮಸೀದಿ ಈದ್ಗಾ ಸಮಿತಿ ಆಪಾದಿಸಿದೆ. ಪ್ರಕರಣದಲ್ಲಿ ಪ್ರತಿಕ್ರಿಯೆ ಸಲ್ಲಿಸುವ ಸರ್ಕಾರದ ಹಕ್ಕನ್ನು ಮುಕ್ತಾಯಗೊಳಿಸಿ ವಿಚಾರಣೆ ಮುಂದುವರಿಸಬೇಕು ಎಂದು ಆಗ್ರಹಿಸಿದೆ.
ಪ್ರಕರಣದಲ್ಲಿ ತನ್ನ ನಿಲುವನ್ನು ಅಫಿಡವಿಟ್ ಮೂಲಕ ಸಲ್ಲಿಸಲು ಕೇಂದ್ರ ಸರ್ಕಾರಕ್ಕೆ 2021ರ ಮಾರ್ಚ್ ನಲ್ಲಿ ಕೋರ್ಟ್ ನೋಟಿಸ್ ಜಾರಿಗೊಳಿಸಿತ್ತು. ಕೇಂದ್ರ ಸರ್ಕಾರ ಇದಕ್ಕೆ ಪದೇ ಪದೇ ಸಮಯಾವಕಾಶ ಕೇಳುತ್ತಾ ಬಂದಿದೆ. "ಪ್ರಾರ್ಥನಾ ಸ್ಥಳಗಳ (ವಿಶೇಷ ಸಲಭ್ಯಗಳು) ಕಾಯ್ದೆ-1991ರ ಕ್ರಮಬದ್ಧತೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರದಲ್ಲಿ ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿ ಅಫಿಡವಿಟ್/ ಪ್ರತಿಕ್ರಿಯೆಯನ್ನು ಸಲ್ಲಿಸುತ್ತಿಲ್ಲ. ಈ ಅರ್ಜಿಗಳಿಗೆ ಸಂಬಂಧಿಸಿದ ರಿಟ್ ಅರ್ಜಿಗಳ ವಿಚಾರಣೆಯನ್ನು ವಿಳಂಬ ಮಾಡುವುದು ಕೇಂದ್ರದ ಉದ್ದೇಶ" ಎಂದು ಸಮಿತಿ ಅಭಿಪ್ರಾಯಪಟ್ಟಿದೆ.
ಸುಪ್ರೀಂಕೋರ್ಟ್ ಇದೀಗ ವಿಚಾರಣೆ ದಿನಾಂಕವನ್ನು ಫೆಬ್ರವರಿ 17ಕ್ಕೆ ನಿಗದಿಪಡಿಸಿರುವ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರದ ಪ್ರತಿ ಅಫಿಡವಿಟ್/ ಪ್ರತಿಕ್ರಿಯೆ ಸಲ್ಲಿಸುವ ಹಕ್ಕನ್ನು ನ್ಯಾಯಮೂರ್ತಿಗಳು ಮುಕ್ತಾಯಗೊಳಿಸುತ್ತಾರೆಯೇ ಎನ್ನುವ ಅಂಶ ಕುತೂಹಲಕ್ಕೆ ಕಾರಣವಾಗಿದೆ.
ಶಾಹಿ ಮಸೀದಿ ಈದ್ಗಾ ಭೂಮಿಯ ಮೇಲೆ ಹಕ್ಕು ಪ್ರತಿಪಾದಿಸಿ ಹಿಂದುತ್ವ ಸಂಘಟನೆಗಳು ಸಲ್ಲಿಸಿರುವ 17 ಅರ್ಜಿಗಳ ವಿಚಾರಣೆ ಅಲಹಾಬಾದ್ ಹೈಕೋರ್ಟ್ ನಲ್ಲಿ ನಡೆಯುತ್ತಿದೆ. ಈ ಮಸೀದಿಯನ್ನು ಕೃಷ್ಣ ಜನ್ಮಸ್ಥಾನದಲ್ಲಿ ನಿರ್ಮಿಸಲಾಗಿದೆ ಎಂಬ ವಾದ ಹಿಂದುತ್ವ ಸಂಘಟನೆಗಳದ್ದು.