ದಿಲ್ಲಿ | ಬಾಡಿಗೆಗಿದ್ದ ಮಹಿಳೆಯ ಟಾಯ್ಲೆಟ್, ಬೆಡ್ರೂಮ್ನಲ್ಲಿ ರಹಸ್ಯ ಕ್ಯಾಮೆರಾಗಳನ್ನಿರಿಸಿದ್ದ ವಿಕಲಾಂಗನ ಬಂಧನ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ : ಬಾಡಿಗೆಗಿದ್ದ ಮಹಿಳೆಯೋರ್ವರನ್ನು ಬಾತರೂಮ್ ಮತ್ತು ಬೆಡ್ರೂಮ್ನಲ್ಲಿ ಚಿತ್ರೀಕರಿಸಲು ಬಲ್ಬ್ಗಳಲ್ಲಿ ರಹಸ್ಯ ಕ್ಯಾಮೆರಾಗಳನ್ನು ಅಳವಡಿಸಿದ್ದ ದಿಲ್ಲಿಯ ಶಕರಪುರದ 30ರ ಹರೆಯದ ವಿಕಲಾಂಗ ವ್ಯಕ್ತಿಯನ್ನು ಪೋಲಿಸರು ಬಂಧಿಸಿದ್ದಾರೆ.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆಯನ್ನು ನಡೆಸುತ್ತಿರುವ ಉತ್ತರ ಪ್ರದೇಶ ಮೂಲಕ ಮಹಿಳೆ ಶಕರಪುರದಲ್ಲಿ ಬಾಡಿಗೆ ಮನೆಯಲ್ಲಿ ಒಂಟಿಯಾಗಿ ವಾಸವಿದ್ದರು. ಆರೋಪಿ ಕರಣ್ ಮನೆಮಾಲಿಕರ ಮಗನಾಗಿದ್ದು, ಇನ್ನೊಂದು ಅಂತಸ್ತಿನಲ್ಲಿ ವಾಸವಾಗಿದ್ದಾನೆ. ಮಹಿಳೆ ಊರಿಗೆ ಹೋಗಿದ್ದಾಗ ಮನೆಯ ಚಾವಿಯನ್ನು ಆತನ ಬಳಿ ನೀಡಿದ್ದಳು.
ತನ್ನ ವಾಟ್ಸ್ಯಾಪ್ ಖಾತೆಯಲ್ಲಿ ಒಂದಿಷ್ಟು ಅಸಹಜ ಚಟುವಟಿಕೆಗಳು ನಡೆಯುತ್ತಿರುವುದನ್ನು ಮಹಿಳೆ ಇತ್ತೀಚಿಗೆ ಗಮನಿಸಿದ್ದಳು. ತನ್ನ ವಾಟ್ಸ್ಯಾಪ್ ಖಾತೆಗೆ ಲಿಂಕ್ ಆಗಿದ್ದ ಸಾಧನಗಳನ್ನು ಪರಿಶೀಲಿಸಿದಾಗ ಅಪರಿಚಿತ ಲ್ಯಾಪ್ಟಾಪ್ವೊಂದು ಅದರಲ್ಲಿ ಕಂಡು ಬಂದಿತ್ತು. ತಕ್ಷಣವೇ ಆಕೆ ಅದನ್ನು ಲಾಗ್ ಔಟ್ ಮಾಡಿದ್ದಳು.
ಈ ಘಟನೆಯ ಬಳಿಕ ಎಚ್ಚರಿಕೆಯಿಂದಿದ್ದ ಮಹಿಳೆಗೆ ತನ್ನ ಮೇಲೆ ಯಾರೋ ನಿಗಾಯಿರಿಸಿದ್ದಾರೆ ಎಂಬ ಶಂಕೆ ಮೂಡಿತ್ತು. ಕಣ್ಗಾವಲು ಸಾಧನಗಳಿಗಾಗಿ ತನ್ನ ಅಪಾರ್ಟ್ಮೆಂಟ್ನಲ್ಲಿ ತಪಾಸಣೆ ನಡೆಸಿದಾಗ ಬಾತ್ರೂಮ್ನ ಬಲ್ಬ್ ಹೋಲ್ಡರ್ನಲ್ಲಿ ಕ್ಯಾಮೆರಾವೊಂದನ್ನು ಅಳವಡಿಸಿದ್ದು ಪತ್ತೆಯಾಗಿತ್ತು ಮತ್ತು ಈ ಬಗ್ಗೆ ಪೋಲಿಸರಿಗೆ ಮಾಹಿತಿ ನೀಡಿದ್ದಳು.
ಸ್ಥಳಕ್ಕೆ ಧಾವಿಸಿದ ಪೋಲಿಸರು ಕೂಲಂಕಶ ತಪಾಸಣೆ ನಡೆಸಿದಾಗ ಬೆಡ್ರೂಮ್ನ ಬಲ್ಬ್ ಹೋಲ್ಡರ್ನಲ್ಲಿ ಇನ್ನೊಂದು ಕ್ಯಾಮೆರಾ ಪತ್ತೆಯಾಗಿತ್ತು.
ನಿಮ್ಮ ಕೋಣೆಯನ್ನು ಬೇರೆ ಯಾರಾದರೂ ಪ್ರವೇಶಿಸಿದ್ದರೇ ಎಂದು ಪೋಲಿಸರು ಕೇಳಿದಾಗ, ತಾನು ಪ್ರಯಾಣ ಮಾಡುವಾಗಲೆಲ್ಲ ಮನೆಯ ಚಾವಿಯನ್ನು ಕರಣ್ ಬಳಿ ಕೊಟ್ಟಿರುತ್ತಿದ್ದೆ ಎಂದು ಮಹಿಳೆ ತಿಳಿಸಿದ್ದಳು.
ವಿಚಾರಣೆ ಸಂದರ್ಭದಲ್ಲಿ, ಮೂರು ತಿಂಗಳುಗಳ ಹಿಂದೆ ಮಹಿಳೆ ಊರಿಗೆ ತೆರಳುವ ಮುನ್ನ ತನ್ನ ಬಳಿ ಚಾವಿ ನೀಡಿದ್ದಳು ಎಂದು ಕರಣ್ ಬಾಯಿಬಿಟ್ಟಿದ್ದ. ಈ ಅವಕಾಶವನ್ನು ಬಳಸಿಕೊಂಡಿದ್ದ ಆತ ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುವ ಮೂರು ರಹಸ್ಯ ಕ್ಯಾಮರಾಗಳನ್ನು ಖರೀದಿಸಿ ಎರಡನ್ನು ಮಹಿಳೆಯ ಮನೆಯಲ್ಲಿ ಅಳವಡಿಸಿದ್ದ ಎಂದು ಪೋಲಿಸರು ವಿವರಿಸಿದರು.
ಈ ಕ್ಯಾಮೆರಾಗಳನ್ನು ಆನ್ಲೈನ್ನಲ್ಲಿ ನಿರ್ವಹಿಸಲಾಗುವುದಿಲ್ಲ ಮತ್ತು ದಾಖಲಾದ ದೃಶ್ಯಾವಳಿಗಳು ಮೆಮರಿ ಕಾರ್ಡ್ಗಳಲ್ಲಿ ಸ್ಟೋರ್ ಆಗುತ್ತವೆ. ಹೀಗಾಗಿ ಕರಣ್ ವಿದ್ಯುತ್ ರಿಪೇರಿ ನೆಪದಲ್ಲಿ ಆಗಾಗ್ಗೆ ಮನೆಯ ಚಾವಿಯನ್ನು ಮಹಿಳೆಯಿಂದ ಪಡೆದುಕೊಳ್ಳುತ್ತಿದ್ದ ಮತ್ತು ಚಿತ್ರೀಕರಣಗೊಂಡ ವೀಡಿಯೊಗಳನ್ನು ತನ್ನ ಲ್ಯಾಪ್ಟಾಪ್ಗೆ ವರ್ಗಾಯಿಸಿಕೊಳ್ಳುತ್ತಿದ್ದ ಎಂದು ಪೋಲಿಸರು ತಿಳಿಸಿದರು.