ವೇತನ ಕೇಳಿದ್ದಕ್ಕೆ ಥಳಿಸಿದ ಗುತ್ತಿಗೆದಾರ | ಉದ್ಯೋಗಿ ಮೃತ್ಯು
ಸಾಂದರ್ಭಿಕ ಚಿತ್ರ
ಹೊಸ ದಿಲ್ಲಿ: ವೇತನ ಕೇಳಿದ್ದಕ್ಕೆ ಗುತ್ತಿಗೆದಾರನಿಂದ ಹಲ್ಲೆಗೊಳಗಾದ 35 ವರ್ಷದ ವ್ಯಕ್ತಿಯೊಬ್ಬ, ಕೆಲವೇ ಗಂಟೆಗಳಲ್ಲಿ ತನ್ನ ನಿವಾಸದಲ್ಲಿ ಮೃತಪಟ್ಟಿರುವ ಘಟನೆ ಹೊರ ದಿಲ್ಲಿಯ ರಂಹೋಲಾ ಪ್ರದೇಶದಲ್ಲಿ ನಡೆದಿದೆ ಎಂದು ಗುರುವಾರ ಪೊಲೀಸರು ತಿಳಿಸಿದ್ದಾರೆ.
ಮೃತ ವ್ಯಕ್ತಿಯನ್ನು ಓಂ ಪ್ರಕಾಶ್ ಎಂದು ಗುರುತಿಸಲಾಗಿದ್ದು, ಬುಧವಾರ ಆತನನ್ನು ಗುತ್ತಿಗೆದಾರ ಥಳಿಸಿದ್ದ ಎಂದು ಆರೋಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಮಧ್ಯಾಹ್ನ 2 ಗಂಟೆ ಸಮಯದಲ್ಲಿ ವ್ಯಕ್ತಿಯೊಬ್ಬರು ತಮ್ಮ ನಿವಾಸದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆಯೆ ಪೊಲೀಸರ ತಂಡವೊಂದು ಸ್ಥಳಕ್ಕೆ ಧಾವಿಸಿತು.
ವೇತನಕ್ಕೆ ಸಂಬಂಧಿಸಿದಂತೆ ನನ್ನ ಅಣ್ಣ ಹಾಗೂ ವ್ಯಕ್ತಿಯೊಬ್ಬನೊಂದಿಗೆ ವಾಗ್ವಾದ ನಡೆದಿತ್ತು ಎಂದು ಓಂ ಪ್ರಕಾಶ್ ಸಹೋದರ ಪೊಲೀಸರಿಗೆ ತಿಳಿಸಿದ್ದಾರೆ.
“ಸುಮಾರು 20 ದಿನಗಳ ಹಿಂದೆ ಓಂ ಪ್ರಕಾಶ್ ಆರೋಪಿಗಾಗಿ ಕೆಲಸ ಮಾಡಿದ್ದ ಹಾಗೂ ತನ್ನ ಬಾಕಿ ವೇತನಕ್ಕಾಗಿ ಒತ್ತಾಯಿಸುತ್ತಿದ್ದ ಎಂಬ ಸಂಗತಿ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪರಸ್ಪರ ಜಗಳ ನಡೆದ ನಂತರ ಮನೆಗೆ ಮರಳಿ ನಿದ್ರೆಗೆ ಜಾರಿದ್ದ ಓಂ ಪ್ರಕಾಶ್, ಮತ್ತೆ ಮೇಲೆದ್ದಿಲ್ಲ ಎನ್ನಲಾಗಿದೆ.
“ನಾವು ಸಾವಿನ ನೈಜ ಕಾರಣದ ಕುರಿತು ತನಿಖೆ ನಡೆಸುತ್ತಿದ್ದು, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 105ರ ಅಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆತನಿಗೆ ಶೋಧ ಕಾರ್ಯ ಕೈಗೊಂಡಿದ್ದಾರೆ.