ದಿಲ್ಲಿ ಸಿಎಂ ಆಯ್ಕೆ ಕಸರತ್ತು ಚುರುಕು; ಅಮಿತ್ ಶಾರನ್ನು ಭೇಟಿಯಾದ ನಡ್ಡಾ

ಅಮಿತ್ ಶಾ , ಜೆ.ಪಿ.ನಡ್ಡಾ | PTI
ಹೊಸದಿಲ್ಲಿ: ಬಿಜೆಪಿ ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ 26 ವರ್ಷಗಳ ಬಳಿಕ ಅಭೂತಪೂರ್ವ ಗೆಲುವು ಸಾಧಿಸಿರುವ ಬೆನ್ನಲ್ಲೇ ನೂತನ ದಿಲ್ಲಿ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವ ಪಕ್ಷದ ಕಸರತ್ತು ರವಿವಾರ ಚುರುಕು ಪಡೆದುಕೊಂಡಿದ್ದು, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ.
ಶನಿವಾರ ಬಿಜೆಪಿಯ ಪ್ರಧಾನ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ,ಬಳಿಕ ಹಿರಿಯ ನಾಯಕರೊಂದಿಗೆ ಸಮಾಲೋಚನೆಗಳನ್ನು ನಡೆಸಿದ್ದರು.
ದಿಲ್ಲಿಯ ಎಲ್ಲ ಪ್ರದೇಶಗಳಲ್ಲಿ ಮತ್ತು ಹೆಚ್ಚಿನ ಸಮುದಾಯಗಳಿಂದ ಗಣನೀಯ ಮತಗಳನ್ನು ಗಳಿಸಿರುವ ಬಿಜೆಪಿಯಲ್ಲೀಗ ಮುಖ್ಯಮಂತ್ರಿ ಹುದ್ದೆಗೆ ಆಕಾಂಕ್ಷಿಗಳ ದೊಡ್ಡ ದಂಡೇ ಇದೆ. ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಆಯ್ಕೆಯಲ್ಲಿ ರಾಜಕೀಯ ಸಂದೇಶವನ್ನು ರವಾನಿಸಿದ್ದ ಬಿಜೆಪಿ ದಿಲ್ಲಿಯಲ್ಲಿಯೂ ಅದೇ ಹೆಜ್ಜೆಯನ್ನಿಡುವ ಸಾಧ್ಯತೆಯಿದೆ ಎಂದು ರಾಜಕೀಯ ವೀಕ್ಷಕರು ಅಭಿಪ್ರಾಯಿಸಿದ್ದಾರೆ.
ಆಪ್ ವರಿಷ್ಠ ಅರವಿಂದ ಕೇಜ್ರಿವಾಲ್ರನ್ನು ಸೋಲಿಸಿರುವ ಜಾಟ್ ಸಮುದಾಯದ ನಾಯಕ ಪರ್ವೇಶ್ ವರ್ಮಾ ಹಾಗೂ ಸತೀಶ ಉಪಾಧ್ಯಾಯ,ವಿಜೇಂದರ್ ಗುಪ್ತಾ,ಆಶಿಷ್ ಸೂದ್ ಮತ್ತು ಪವನ್ ಶರ್ಮಾರಂತಹ ಅನುಭವಿ ನಾಯಕರ ಹೆಸರುಗಳು ಮುಖ್ಯಮಂತ್ರಿ ಹುದ್ದೆಗೆ ಕೇಳಿ ಬರುತ್ತಿವೆಯಾದರೂ,ಬಿಜೆಪಿಯು ತುಲನಾತ್ಮಕವಾಗಿ ಹೆಚ್ಚು ಪ್ರಚಾರದಲ್ಲಿರದ ನಾಯಕರನ್ನು ಮುಖ್ಯಮಂತ್ರಿಗಳನ್ನಾಗಿ ಮಾಡಿರುವ ಇತಿಹಾಸವನ್ನು ಹೊಂದಿದೆ.
ಉನ್ನತ ನಾಯಕರ ರಾಜಕೀಯ ಲೆಕ್ಕಾಚಾರಗಳನ್ನು ಅವಲಂಬಿಸಿ ಪಕ್ಷವು ಪೂರ್ವಾಂಚಲಿ ಹಿನ್ನೆಲೆಯ ಅಥವಾ ಮಹಿಳೆ ಅಥವಾ ಸಿಖ್ ಶಾಸಕರೋರ್ವರನ್ನೂ ಮುಖ್ಯಮಂತ್ರಿ ಹುದ್ದೆಗೆ ಪರಿಗಣಿಸಬಹುದು ಎಂದು ಬಿಜೆಪಿ ನಾಯಕರೋರ್ವರು ಹೇಳಿದರು.
2023ರಲ್ಲಿ ರಾಜಸ್ಥಾನ ಮತ್ತು ಮಧ್ಯಪ್ರದೇಶ ಹಾಗೂ ಕಳೆದ ವರ್ಷ ಒಡಿಶಾ ಸೇರಿದಂತೆ ಹಿಂದಿನ ಅನುಭವವು ಇಂತಹ ವಿಷಯಗಳಲ್ಲಿ ಊಹಾಪೋಹಗಳಿಗೆ ಹೆಚ್ಚಿನ ಅವಕಾಶವನ್ನು ನೀಡುವುದಿಲ್ಲ ಎಂದರು.
ಬಿಜೆಪಿಯು ಮಧ್ಯಪ್ರದೇಶದಲ್ಲಿ ಮೋಹನ ಯಾದವ,ರಾಜಸ್ಥಾನದಲ್ಲಿ ಭಜನಲಾಲ ಶರ್ಮಾ ಮತ್ತು ಒಡಿಶಾದಲ್ಲಿ ಮೋಹನ ಚರಣ ಮಾಝಿ ಅವರನ್ನು ಮುಖ್ಯಮಂತ್ರಿ ಹುದ್ದೆಗೇರಿಸುವ ಮೂಲಕ ಹೆಚ್ಚಿನ ರಾಜಕೀಯ ವೀಕ್ಷಕರ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿತ್ತು.
ನಿಮಗೆಂದಿಗೂ ಗೊತ್ತೇ ಆಗುವುದಿಲ್ಲ. ರಾಷ್ಟ್ರೀಯ ನಾಯಕತ್ವವು ಜನರ ಹೆಚ್ಚಿನ ನಿರೀಕ್ಷೆಗಳ ನಡುವೆ ಮುಖ್ಯಮಂತ್ರಿಯಾಗಿ ಕರ್ತವ್ಯಗಳನ್ನು ನಿರ್ವಹಿಸಲು ಸಮರ್ಥವಾಗಿರುವ ಸಂಪೂರ್ಣ ತಾಜಾ ಮುಖವನ್ನು ಆರಿಸಬಹುದು ಎಂದು ಬಿಜೆಪಿ ನಾಯಕ ಹೇಳಿದರು.
ಮುಖ್ಯಮಂತ್ರಿ ಕುರಿತು ನಿರ್ಧಾರವನ್ನು ಪಕ್ಷದ ಕೇಂದ್ರ ನಾಯಕತ್ವವು ತೆಗೆದುಕೊಳ್ಳುತ್ತದೆ ಮತ್ತು ಹೊಸದಾಗಿ ಆಯ್ಕೆಯಾಗಿರುವ ಎಲ್ಲ ಶಾಸಕರು ತಮಗೆ ನೀಡಲಾದ ಹೊಣೆಗಾರಿಕೆಯನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಬಿಜೆಪಿಯ ದಿಲ್ಲಿ ಘಟಕದ ಅಧ್ಯಕ್ಷ ವೀರೇಂದ್ರ ಸಚದೇವ ಹೇಳಿದರು.