ದಿಲ್ಲಿಯ ನೂತನ ಬಿಜೆಪಿ ಶಾಸಕನಿಂದ ಮುಸ್ಲಿಂ ವ್ಯಕ್ತಿಯ ನಿವೇಶನಕ್ಕೆ ಬುಲ್ಡೋಝರ್ ಹರಿಸುವ ಬೆದರಿಕೆ!
ಘಟನೆಯ ವೀಡಿಯೊವನ್ನು ತಾನಾಗಿಯೇ ಪ್ರಧಾನಿ, ಅಮಿತ್ಶಾಗೆ ಟ್ಯಾಗ್ ಮಾಡಿದ ರವೀಂದರ್ ಸಿಂಗ್ ನೇಗಿ

ಸಾಂದರ್ಭಿಕ ಚಿತ್ರ | PTI
ಹೊಸದಿಲ್ಲಿ: ದಿಲ್ಲಿಯ ಪ್ರತಾಪ್ಗಂಜ್ನಲ್ಲಿ ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬರಿಗೆ ಸೇರಿದ ನಿವೇಶನದ ಮೇಲೆ ಬುಲ್ಡೋಝರ್ ಹರಿಸುವುದಾಗಿ ನೂತನವಾಗಿ ಚುನಾಯಿತನಾದ ಬಿಜೆಪಿ ಶಾಸಕ ರವೀಂದರ್ ಸಿಂಗ್ ನೇಗಿ ಬೆದರಿಕೆಯೊಡ್ಡಿದ್ದು, ಘಟನೆಯ ವೀಡಿಯೊವನ್ನು ಆತ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಹರಿಯಬಿಟ್ಟಿದ್ದಾರೆ.
ದಿಲ್ಲಿ ಮಹಾನಗರಪಾಲಿಕೆಯ ಸದಸ್ಯನಾಗಿದ್ದ ನೇಗಿ ಇತ್ತೀಚೆಗೆ ನಡೆದ ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಪ್ರತಾಪ್ಗಂಜ್ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಮುಸ್ಲಿಮರನ್ನು ಗುರಿಯಿರಿಸಿ ಕಿರುಕುಳ ನೀಡುವುದರಲ್ಲಿ ಈತ ಕುಖ್ಯಾತನೆನ್ನಲಾಗಿದೆ. ಗುರುವಾರದಂದು ಆತ ಅಬ್ದುಲ್ ರಹೀಮ್ ಎಂಬವರ ಕಟ್ಟಡ ನಿವೇಶನದ ಮೇಲೆ ಜೆಸಿಬಿ ಹರಿಸುವುದಾಗಿ ಬೆದರಿಕೆಯೊಡ್ಡುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಈ ವೀಡಿಯೋವನ್ನು ಆತ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವ ಹರ್ಷ ಮಲ್ಹೋತ್ರಾ ಹಾಗೂ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೂ ಟ್ಯಾಗ್ ಮಾಡಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾದ ವೀಡಿಯೊದಲ್ಲಿ ಆತ ಗುಂಪೊಂದನ್ನು ಉದ್ದೇಶಿಸಿ ಮಾತನಾಡುತ್ತಾ, ‘‘ನೀವು ಈ ಜಾಗವನ್ನು ಖಾಲಿ ಮಾಡಬೇಕು. ಇಲ್ಲದೇ ಇದ್ದಲ್ಲಿ ದೊಡ್ಡ ಕ್ರಮವನ್ನು ಕೈಗೊಳ್ಳಲಾಗುವುದು. ಇದರಿಂದಾಗಿ ಜೀವಮಾನವಿಡೀ ನೀವು ತೊಂದರೆಯಲ್ಲಿ ಸಿಲುಕುವಿರಿ. ಸ್ಥಳೀಯರ ಮಾದಕದ್ರವ್ಯ ವ್ಯಸನದ ಚಟುವಟಿಕೆಗಳು ನಿಲ್ಲಬೇಕು ’’ಎಂದು ಅವರು ಹೇಳುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿದೆ.
ಮಾದಕದ್ರವ್ಯಕ್ಕೆ ಸಂಬಂಧಿಸಿದ ಯಾವುದೇ ಚಟುವಟಿಕೆಗಳನ್ನು ತಾನು ನಡೆಸುತ್ತಿಲ್ಲವೆಂದು ಆ ವ್ಯಕ್ತಿಯು ಗೋಗರೆದರೂ ಕಿವಿಗೊಡದ ನೇಗಿ, ಆ ವ್ಯಕ್ತಿಯ ನಿವೇಶನದ ಮೇಲೆ ಬುಲ್ಡೋಝರ್ ಹರಿಸುವುದಾಗಿ ಬೆದರಿಕೆ ಹಾಕುತ್ತಿರುವುದು ವೀಡಿಯೊದಲ್ಲಿ ಕಾಣಿಸಿದೆ.
ವೀಡಿಯೊದಲ್ಲಿದ್ದ ಮುಸ್ಲಿಂ ವ್ಯಕ್ತಿಯ ಬಳಿ ಆತ ಹೆಸರೇನೆಂಬುದನ್ನು ಕೇಳಿ ತಿಳಿದುಕೊಂಡ ಬಳಿಕ ನೇಗಿ, ಆತನಿಗೆ ‘‘ ಅಬ್ದುಲ್ ಭಾಯಿ, ನಾನಿಲ್ಲಿ ಜೆಸಿಬಿ ಓಡಿಸುತ್ತೇನೆ. ನಿಮಿಷದೊಳಗೆ ಎಲ್ಲವೂ ನೆಲಸಮವಾಗಲಿದೆ’’ ಎಂದು ಬೆದರಿಕೆ ಹಾಕಿದ್ದಾನೆ.
ಈ ನಿವೇಶನವು ದಿಲ್ಲಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ್ದಾಗಿದೆಯೆಂದು ನೇಗಿ ಹೇಳಿಕೊಂಡಿದ್ದಾರೆ.