ದಿಲ್ಲಿ: ವಾಯು ಗುಣಮಟ್ಟ ಸತತ 4ನೇ ದಿನವೂ ಗಂಭೀರ
ನಗರವನ್ನು ಆವರಿಸಿದ ದಟ್ಟ ಮಲಿನ ಹೊಗೆ
PC : PTI
ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿಯ ಹಲವು ಭಾಗಗಳಲ್ಲಿ ವಾಯು ಗುಣಮಟ್ಟವು ಶನಿವಾರ ಗಂಭೀರವಾಗಿಯೇ ಮುಂದುವರಿದಿದೆ ಹಾಗೂ ಸತತ ನಾಲ್ಕನೇ ದಿನವೂ ದಿಲ್ಲಿ, ನೋಯಿಡ, ಘಾಝಿಯಾಬಾದ್, ಗುರುಗ್ರಾಮ ಮತ್ತು ರಾಷ್ಟ್ರ ರಾಜಧಾನಿ ವಲಯದ ಇತರ ಸ್ಥಳಗಳನ್ನು ದಟ್ಟ ಮಲಿನ ಹೊಗೆ ಆವರಿಸಿದೆ.
ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ)ಯ ಪ್ರಕಾರ, ದಿಲ್ಲಿಯ ಶಾದಿಪುರದ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ)ವು ಶನಿವಾರ ಬೆಳಗ್ಗಿನ 9 ಗಂಟೆಯ ವೇಳೆಗೆ 457 (ಸೀವಿಯರ್ ಪ್ಲಸ್ ವಿಭಾಗ) ಆಗಿತ್ತು. ದಿಲ್ಲಿಯಲ್ಲಿ ಅತ್ಯಂತ ಕಳಪೆ ವಾಯು ಗುಣಮಟ್ಟ ದಾಖಲಾದ ಪ್ರದೇಶಗಳಲ್ಲಿ ನರೇಲ (449), ವಝೀರ್ಪುರ (441) ಮತ್ತು ಜಹಾಂಗೀರ್ಪುರಿ (445) ಸೇರಿವೆ. 400ಕ್ಕಿಂತ ಹೆಚ್ಚಿನ ವಾಯು ಗುಣಮಟ್ಟ ಸೂಚ್ಯಂಕ ದಾಖಲಾಗಿರುವ ಪ್ರದೇಶಗಳು ‘‘ತೀವ್ರ’’ ವಿಭಾಗದಲ್ಲಿ ಬರುತ್ತವೆ.
ಖಾಸಗಿ ಬಿಎಸ್ 3 ಪೆಟ್ರೋಲ್, ಬಿಎಸ್ 4 ಡೀಸೆಲ್ ವಾಹನಗಳ ನಿಷೇಧ
ದಿಲ್ಲಿ ಸರಕಾರವು ವಾಯು ಮಾಲಿನ್ಯ ನಿಯಂತ್ರಣ ಕ್ರಮಗಳ ಭಾಗವಾಗಿ ಖಾಸಗಿ ಬಿಎಸ್ 3 ಪೆಟ್ರೋಲ್ ಮತ್ತು ಬಿಎಸ್ 4 ಡೀಸೆಲ್ ವಾಹನಗಳು ರಸ್ತೆಗಿಳಿಯುವುದನ್ನು ನಿಷೇಧಿಸಿದೆ. ಅದೂ ಅಲ್ಲದೆ, ಅಂತರ್ರಾಜ್ಯ ಇಲೆಕ್ಟ್ರಿಕ್-ಸಿಎನ್ಜಿಯೇತರ ಬಸ್ಗಳ ದಿಲ್ಲಿ ಪ್ರವೇಶಕ್ಕೆ ನಿಷೇಧ ಹೇರಿದೆ. ಕೆಲವು ವರ್ಗಗಳ ಕಟ್ಟಡ ನಿರ್ಮಾಣ ಚಟುವಟಿಕೆಗಳಿಗೆ ತಡೆ ಹಾಕಿದೆ ಮತ್ತು ಸರಕಾರಿ ಕಚೇರಿಗಳ ಸಮಯಗಳನ್ನು ಬದಲಿಸಿದೆ.
ನಿಷೇಧ ಉಲ್ಲಂಘಿಸುವ ಖಾಸಗಿ ಬಿಎಸ್ 3 ಪೆಟ್ರೋಲ್ ಮತ್ತು ಬಿಎಸ್ 4 ಡೀಸೆಲ್ ವಾಹನಗಳಿಗೆ 20,000 ದಂಡ ವಿಧಿಸಲಾಗುತ್ತದೆ. ಉಲ್ಲಂಘಕರನ್ನು ಹಿಡಿಯಲು ಸಾರಿಗೆ ಇಲಾಖೆಯು 84 ತಂಡಗಳು ಮತ್ತು ಹೆಚ್ಚುವರಿಯಾಗಿ 280 ಸಿಬ್ಬಂದಿಯನ್ನು ನಿಯೋಜಿಸಿದೆ ಎಂದು ದಿಲ್ಲಿ ಪರಿಸರ ಸಚಿವ ಗೋಪಾಲ್ ರೈ ತಿಳಿಸಿದರು.
ಸರಕಾರಿ ಕಚೇರಿಗಳ ಸಮಯ ಬದಲಾವಣೆ:
ದಿಲ್ಲಿಯ ಸರಕಾರಿ ಕಚೇರಿಗಳ ವೇಳಾಪಟ್ಟಿಯಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ ಎಂದು ದಿಲ್ಲಿ ಮುಖ್ಯಮಂತ್ರಿ ಆತಿಶಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪ್ರಕಟಿಸಿದ್ದಾರೆ.
ಅದರಂತೆ, ಕೇಂದ್ರ ಸರಕಾರದ ಕಚೇರಿಗಳು ಬೆಳಗ್ಗೆ 9 ಗಂಟೆಯಿಂದ ಸಂಜೆ 5:30ರವರೆಗೆ ಕಾರ್ಯಾಚರಿಸುತ್ತವೆ. ಅದೇ ವೇಳೆ, ದಿಲ್ಲಿ ಸರಕಾರದ ಕಚೇರಿಗಳು ಬೆಳಗ್ಗೆ 10 ಗಂಟೆಯಿಂದ ಸಂಜೆ 6:30ರವರೆಗೆ ತೆರೆದಿರುತ್ತವೆ. ದಿಲ್ಲಿ ಮಹಾನಗರ ಪಾಲಿಕೆಯ ಕಚೇರಿಗಳು ಬೆಳಗ್ಗೆ 8:30ರಿಂದ ಸಂಜೆ 5 ರವರೆಗೆ ಕೆಲಸ ಮಾಡಲಿವೆ.
5ನೇ ತರಗತಿವರೆಗೆ ಆನ್ಲೈನ್ ಪಾಠ:
ದಿಲ್ಲಿ ಶಾಲೆಗಳ ಐದನೇವರೆಗಿನ ತರಗತಿಗಳಿಗೆ ಈ ವಾರಾಂತ್ಯದ ಬಳಿಕ ಪಾಠಗಳನ್ನು ಆನ್ಲೈನ್ನಲ್ಲಿ ಮಾಡಲಾಗುವುದು. ಇದಕ್ಕಾಗಿ ತಾವು ಆ್ಯಪ್ಗಳು ಮತ್ತು ಸ್ಮಾರ್ಟ್ ಬೋರ್ಡ್ಗಳನ್ನು ಬಳಸುತ್ತಿರುವುದಾಗಿ ಹಲವು ಖಾಸಗಿ ಶಾಲೆಗಳ ಪ್ರಾಂಶುಪಾಲರು ಮತ್ತು ಶಿಕ್ಷಕರು ಹೇಳಿದ್ದಾರೆ.