ನಾಳೆ ದಿಲ್ಲಿ ವಿಧಾನಸಭಾ ಚುನಾವಣೆ ಫಲಿತಾಂಶ | ದಿಲ್ಲಿ ಗದ್ದುಗೆ ಯಾರಿಗೆ?

ಹೊಸದಿಲ್ಲಿ: ದಿಲ್ಲಿ ವಿಧಾನಸಭಾ ಚುನಾವಣೆಯ ಮತಏಣಿಕೆ ಶನಿವಾರ ನಡೆಯಲಿದೆ. ಆಪ್ ಸತತ ನಾಲ್ಕನೇ ಬಾರಿಗೆ ಹ್ಯಾಟ್ರಿಕ್ ಗೆಲುವನ್ನು ಸಾಧಿಸಲಿದೆಯೇ ಅಥವಾ 27 ವರ್ಷಗಳ ಸುದೀರ್ಘ ಅಂತರದ ಬಳಿಕ ರಾಷ್ಟ್ರರಾಜಧಾನಿಯಲ್ಲಿ ಬಿಜೆಪಿಯು ಅಧಿಕಾರದ ಚುಕ್ಕಾಣಿ ಹಿಡಿಯಲಿದೆಯೇ ಎಂಬುದು ನಾಳೆ ನಿರ್ಧಾರವಾಗಲಿದೆ.
ಕಳೆದ ಎರಡು ಚುನಾವಣಾ ಶೂನ್ಯ ಸಂಪಾದನೆ ಮಾಡಿರುವ ಕಾಂಗ್ರೆಸ್ ಪಕ್ಷ ಈ ಸಲದ ಚುನಾವಣೆಯಲ್ಲಿ ಗಮನಾರ್ಹ ನಿರ್ವಹಣೆಯನ್ನು ಪ್ರದರ್ಶಿಸುವ ಭರವಸೆಯನ್ನು ಹೊಂದಿದೆ.
ಬಹುತೇಕ ಮತದಾನೋತ್ತರ ಸಮೀಕ್ಷೆಗಳು ದಿಲ್ಲಿ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಲಿದೆಯೆಂದು ಭವಿಷ್ಯ ನುಡಿದಿವೆ.
ಶನಿವಾರ ಬೆಳಗ್ಗೆ 8:00 ಗಂಟೆಗೆ ಮತಏಣಿಕೆ ಆರಂಭಗೊಳ್ಳಲಿದ್ದು, 12 ಗಂಟೆಯೊಳಗೆ ಫಲಿತಾಂಶದ ಸ್ಪಷ್ಟ ಚಿತ್ರಣ ಲಭ್ಯವಾಗುವ ನಿರೀಕ್ಷೆಯಿದೆ. ಬುಧವಾರ ನಡೆದ ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಶೇ.60.54ರಷ್ಟು ಮತದಾನವಾಗಿತ್ತು.
ಮತಏಣಿಕೆ ಕೇಂದ್ರಗಳಲ್ಲಿ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿದೆ. ಮತಏಣಿಕೆ ಮೇಲ್ವಿಚಾರಕರು, ಮತಏಣಿಕೆ ಸಹಾಯಕರು, ಸೂಕ್ಷ್ಮ ವೀಕ್ಷಕರು ಹಾಗೂ ಪೂರಕ ಸಿಬ್ಬಂದಿ ಸೇರಿದಂತೆ 5 ಸಾವಿರಕ್ಕೂ ಅಧಿಕ ಮಂದಿಯನ್ನು ಮತಏಣಿಕೆ ಪ್ರಕ್ರಿಯೆಗೆ ನಿಯೋಜಿಸಲಾಗಿದೆ.
ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಗೆ ಸೇರಲು ಕ್ಲಿಕ್ ಮಾಡಿ ► https://whatsapp.com/channel/0029VaA8ju86LwHn9OQpEq28