ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಮುಂದೂಡಿಕೆ : ದಿಲ್ಲಿ ಸಿಎಂ ಆಯ್ಕೆ ಮತ್ತೆ ವಿಳಂಬ!

ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ದಿಲ್ಲಿ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿ ಒಂದು ವಾರ ಕಳೆದಿದೆ. ಆದರೆ ಬಿಜೆಪಿ ಈವರೆಗೆ ರಾಷ್ಟ್ರ ರಾಜಧಾನಿಯು ನೂತನ ಮುಖ್ಯಮಂತ್ರಿಯ ಹೆಸರನ್ನು ಘೋಷಿಸಿಲ್ಲ. ಮುಖ್ಯಮಂತ್ರಿ ಆಯ್ಕೆ ಕುರಿತು ಬಿಜೆಪಿ ಶಾಸಕಾಂಗ ಪಕ್ಷದ ಸಭೆಯನ್ನು ಸೋಮವಾರ ಕರೆದಿತ್ತು. ಸಭೆಯಲ್ಲಿ ದಿಲ್ಲಿ ಸಿಎಂ ಕುರಿತ ಕುತೂಹಲಕ್ಕೆ ತೆರೆ ಬೀಳಲಿದೆ ಎಂದು ಹೇಳಲಾಗಿತ್ತು. ಆದರೆ ಇದೀಗ ಬಿಜೆಪಿಯ ಶಾಸಕಾಂಗ ಪಕ್ಷದ ಸಭೆಯನ್ನೇ ಮುಂದೂಡಲಾಗಿದೆ.
ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಮುಂದೂಡಿರುವುದು ದೃಢಪಟ್ಟಿದೆ ಎಂದು Deccan Herald ವರದಿ ಮಾಡಿದೆ. ಫೆಬ್ರವರಿ 19ರಂದು ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಈ ಮೊದಲು ಹೇಳಲಾಗಿತ್ತು. ಆದರೆ, ಮುಖ್ಯಮಂತ್ರಿಗಳು ಮತ್ತು ಸಚಿವರ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳದ ಹಿನ್ನೆಲೆ ಅದು ಕೂಡ ಮುಂದುವರಿಯುವ ಸಾಧ್ಯತೆ ಇದೆ.
ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 48 ಸ್ಥಾನಗಳಲ್ಲಿ ಗೆಲುವನ್ನು ಸಾಧಿಸುವ ಮೂಲಕ ಬಹುಮತವನ್ನು ಪಡೆದುಕೊಂಡಿದೆ. ಬಿಜೆಪಿಯಲ್ಲಿ ಹಲವರು ಸಿಎಂ ಹುದ್ದೆಯ ಆಕಾಂಕ್ಷಿಗಳಿದ್ದಾರೆ. ದಿಲ್ಲಿಯ ಮುಖ್ಯಮಂತ್ರಿಯನ್ನಾಗಿ ಬಿಜೆಪಿ ಹೈಕಮಾಂಡ್ ಯಾರ ಹೆಸರನ್ನು ಅಂತಿಮವಾಗಿ ಘೋಷಿಸಲಿದೆ ಎಂದು ಕಾದು ನೋಡಬೇಕಿದೆ.