ದಿಲ್ಲಿ ವಿಧಾನಸಭಾ ಚುನಾವಣೆ | ಆಪ್ ನೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಸಿದ್ಧವಿತ್ತು; ಆದರೆ, ಕೇಜ್ರಿವಾಲ್ ನಿರಾಕರಿಸಿದರು: ತಾರಿಖ್ ಹಮೀದ್ ಕರ್

ತಾರಿಖ್ ಹಮೀದ್ ಕರ್ | PTI
ಶ್ರೀನಗರ: ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಆಪ್ ನೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಸಿದ್ಧವಿತ್ತು. ಆದರೆ, ಅದರ ಸಂಚಾಲಕ ಅರವಿಂದ್ ಕೇಜ್ರಿವಾಲ್ ನಿರಾಕರಿಸಿದರು ಎಂದು ರವಿವಾರ ಜಮ್ಮು ಮತ್ತು ಕಾಶ್ಮೀರ ಕಾಂಗ್ರೆಸ್ ಅಧ್ಯಕ್ಷ ತಾರಿಖ್ ಹಮೀದ್ ಕರ್ ಆರೋಪಿಸಿದ್ದಾರೆ.
“ಮೈತ್ರಿಯೊಂದಿಗೆ ಚುನಾವಣೆಗೆ ಹೋಗಲು ಕಾಂಗ್ರೆಸ್ ಸದಾ ಸಿದ್ಧವಿತ್ತು. ಆದರೆ, ಮೈತ್ರಿಯ ಭಾಗವಾಗಲು ಅರವಿಂದ್ ಕೇಜ್ರಿವಾಲ್ ನಿರಾಕರಿಸಿದರು. ಅವರು ಜಂಟಿ ಚುನಾವಣೆಗೆ ಸಿದ್ಧರಿರಲಿಲ್ಲ” ಎಂದು ಅವರು ಹೇಳಿದ್ದಾರೆ.
ದಿಲ್ಲಿ ವಿಧಾನಸಭಾ ಚುನಾವಣಾ ಫಲಿತಾಂಶ ನಿರಾಶಾದಾಯಕವಾಗಿದ್ದರೂ, ಕಾಂಗ್ರೆಸ್ ಇಲ್ಲದ ಯಾವುದೇ ವಿರೋಧ ಪಕ್ಷಗಳ ಮೈತ್ರಿಕೂಟ ಅಪೂರ್ಣ ಎಂಬುದು ಇದರಿಂದ ಸ್ಪಷ್ಟವಾಗಿದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.
“ಈ ಇಡೀ ಪ್ರಕ್ರಿಯೆಯಿಂದ ಹೊರಹೊಮ್ಮಿರುವ ಒಂದು ಸಂಗತಿಯೆಂದರೆ, ಇಂಡಿಯಾ ಮೈತ್ರಿಕೂಟಕ್ಕೆ ಸಂಬಂಧಿಸಿದಂತೆ, ಕಾಂಗ್ರೆಸ್ ಪಕ್ಷವಿಲ್ಲದೆ ಏನನ್ನೂ ಮಾಡಲು ಸಾಧ್ಯವಿಲ್ಲ ಎಂಬುದು ಮೈತ್ರಿಕೂಟದ ಅಂಗಪಕ್ಷಗಳಿಗೆ ರವಾನೆಯಾಗಿರುವ ಸಂದೇಶವಾಗಿದೆ” ಎಂದು ಅವರು ಪ್ರತಿಪಾದಿಸಿದ್ದಾರೆ.
“ನನ್ನ ಅಭಿಪ್ರಾಯದಲ್ಲಿ ಬಿಜೆಪಿ ಹಾಗೂ ಆರೆಸ್ಸೆಸ್ ಉಪಟಳದ ವಿರುದ್ಧ ನಾವು ಹೋರಾಡಬೇಕೆಂದರೆ, ಕಾಂಗ್ರೆಸ್ ಇಲ್ಲದೆ ಅದು ಸಾಧ್ಯವಿಲ್ಲ ಎಂಬುದು ಇಂಡಿಯಾ ಮೈತ್ರಿಕೂಟಕ್ಕೆ ಈ ಫಲಿತಾಂಶ ನೀಡಿರುವ ಸಂದೇಶವಾಗಿದೆ. ಅವರು ಕ್ಷುಲ್ಲಕ ವಿಷಯಗಳಲ್ಲಿ ಮುಳುಗಬಾರದು. ತುಂಬಾ ಗಟ್ಟಿ ಹಾಗೂ ಸ್ಪಷ್ಟವಾಗಿರುವ ಈ ಸಂದೇಶವು ಇಂಡಿಯಾ ಮೈತ್ರಿಕೂಟದ ಅಂಗಪಕ್ಷಗಳನ್ನು ತಲುಪಲಿದೆ ಎಂದು ನಾನು ಆಶಿಸುತ್ತೇನೆ” ಎಂದು ಅವರು ಹೇಳಿದ್ದಾರೆ.