ದಿಲ್ಲಿ ಮುಖ್ಯಮಂತ್ರಿ ಆತಿಶಿ ಬಗ್ಗೆ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ ರಮೇಶ್ ಬಿಧುರಿ
ಆತಿಶಿ , ರಮೇಶ್ ಬಿಧುರಿ| PC : PTI
ಹೊಸದಿಲ್ಲಿ: ಬಿಜೆಪಿ ಹಿರಿಯ ನಾಯಕ ಮತ್ತು ಕಲ್ಕಾಜಿ ಕ್ಷೇತ್ರದ ಅಭ್ಯರ್ಥಿ ರಮೇಶ್ ಬಿಧುರಿ ಬುಧವಾರ ದಿಲ್ಲಿ ಮುಖ್ಯಮಂತ್ರಿ ಆತಿಶಿ "ಜಿಂಕೆಯಂತೆ" ಓಡಾಡುತ್ತಿದ್ದಾರೆ ಎಂದು ಹೇಳಿ ಮತ್ತೊಮ್ಮೆ ವಿವಾದವನ್ನು ಸೃಷ್ಟಿಸಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿಯ ಮಾಜಿ ಸಂಸದ ಬಿಧುರಿ, ಬೀದಿಗಳ ಹದಗೆಟ್ಟ ಪರಿಸ್ಥಿತಿಯಿಂದಾಗಿ ದಿಲ್ಲಿಯ ಜನರು ನರಳುತ್ತಿದ್ದಾರೆ. ಬೀದಿಗಳ ಸ್ಥಿತಿಯನ್ನು ನೋಡಿ, ಆತಿಶಿ ಎಂದಿಗೂ ಜನರನ್ನು ಭೇಟಿ ಮಾಡಲು ಹೋಗಲಿಲ್ಲ, ಆದರೆ ಈಗ ಚುನಾವಣೆಯ ಸಮಯದಲ್ಲಿ ಅವರು ಕಾಡಿನಲ್ಲಿ ಓಡುವ ಜಿಂಕೆಯಂತೆ ದಿಲ್ಲಿಯ ಬೀದಿಗಳಲ್ಲಿ ಓಡಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ರಮೇಶ್ ಬಿಧುರಿ ಅವರ ಹೇಳಿಕೆ ಬಗ್ಗೆ ಎಎಪಿ ಪಕ್ಷ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಜನವರಿ 6ರಂದು ದಿಲ್ಲಿಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ ರಮೇಶ್ ಬಿಧುರಿ, ಆತಿಶಿ ತನ್ನ ಉಪನಾಮ "ಮರ್ಲೆನಾ" ಅನ್ನು "ಸಿಂಗ್" ಎಂದು ಬದಲಿಸಿ ಅವರು "ತನ್ನ ತಂದೆಯನ್ನು ಬದಲಾಯಿಸಿದ್ದಾರೆ" ಎಂದು ಹೇಳಿದ್ದರು.
ಇದಕ್ಕೂ ಮೊದಲು ಮಾತನಾಡಿದ್ದ ರಮೇಶ್ ಬಿಧುರಿ ಕಲ್ಕಾಜಿಯಲ್ಲಿ ಪ್ರಿಯಾಂಕಾ ಗಾಂಧಿಯ ಕೆನ್ನೆಯಂತಿರುವ ರಸ್ತೆಗಳನ್ನು ನಿರ್ಮಿಸುವುದಾಗಿ ಹೇಳಿಕೆ ನೀಡಿ ವಿವಾದವನ್ನು ಸೃಷ್ಟಿಸಿದ್ದರು. ಪ್ರಿಯಾಂಕಾ ಗಾಂಧಿ ವಿರುದ್ಧದ ಬಿಧುರಿ ಅವರ ಹೇಳಿಕೆಯು ಬಿಜೆಪಿಯ ಮಹಿಳಾ ವಿರೋಧಿ ಭಾವನೆಯನ್ನು ಪ್ರತಿಬಿಂಬಿಸುತ್ತದೆ ಎಂದು ಕಾಂಗ್ರೆಸ್ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು.