ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರಿಟ್ಟ ದಿಲ್ಲಿ ಮುಖ್ಯಮಂತ್ರಿ ಆತಿಶಿ
ತಂದೆಯ ಬಗ್ಗೆ ಬಿಜೆಪಿ ನಾಯಕ ರಮೇಶ್ ಬಿಧುರಿ ಆಕ್ಷೇಪಾರ್ಹ ಹೇಳಿಕೆ
ದಿಲ್ಲಿ ಮುಖ್ಯಮಂತ್ರಿ ಆತಿಶಿ | PTI
ಹೊಸದಿಲ್ಲಿ: ಬಿಜೆಪಿ ನಾಯಕ ರಮೇಶ್ ಬಿಧುರಿ ಅವರು ತನ್ನ ತಂದೆ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿರುವುದಕ್ಕೆ ದಿಲ್ಲಿ ಮುಖ್ಯಮಂತ್ರಿ ಆತಿಶಿ ಅವರು ಇಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರು ಹಾಕಿದರು.
ಬಿಧುರಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಆತಿಶಿ, ತಮ್ಮ ರಾಜಕೀಯ ಇಷ್ಟು ಕೆಲಮಟ್ಟಕ್ಕೆ ಇಳಿಯುವುದು ಹೇಗೆ ಸಾಧ್ಯ ? ಬಿಧುರಿ ಅವರು 10 ವರ್ಷ ಸಂಸದರಾಗಿದ್ದಾಗ ಕಲ್ಕಾಜಿಯಲ್ಲಿ ಯಾವ ಕೆಲಸ ಮಾಡಿದ್ದಾರೆ ಎಂಬುದನ್ನು ತೋರಿಸಬೇಕು ಎಂದು ಹೇಳಿದರು.
ಬಿಧುರಿ ಅವರು ತಾನು ಮಾಡಿದ ಕೆಲಸದ ಆಧಾರದಲ್ಲಿ ಮತ ಕೇಳಬೇಕೇ ಹೊರತು, ತನ್ನ ತಂದೆಯನ್ನು ನಿಂದಿಸುವ ಮೂಲಕ ಮತ ಕೇಳುವುದಲ್ಲ ಎಂದು ಆತಿಶಿ ಹೇಳಿದರು.
ನನ್ನ ತಂದೆ ಶಿಕ್ಷಕರಾಗಿದ್ದರು. ಅವರಿಗೆ ಈಗ 80 ವರ್ಷ ವಯಸ್ಸಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಚುನಾವಣೆ ಅಥವಾ ರಾಜಕೀಯದ ಕಾರಣಕ್ಕೆ ಅವರನ್ನು ಗುರಿಯಾಗಿರಿಸಿ ಮಾತನಾಡುವುದು ಎಷ್ಟು ಸರಿ ಎಂದು ಆತಿಶಿ ಪ್ರಶ್ನಿಸಿದರು.
ರೋಹಿಣಿಯಲ್ಲಿ ರವಿವಾರ ನಡೆದ ಬಿಜೆಪಿಯ ಪರಿವರ್ತನಾ ರ್ಯಾಲಿಯಲ್ಲಿ ಮಾತನಾಡಿದ ರಮೇಶ್ ಬಿಧುರಿ, ದಿಲ್ಲಿ ಮುಖ್ಯಮಂತ್ರಿ ಆತಿಶಿ ತಮ್ಮ ತಂದೆಯನ್ನು ಬದಲಾಯಿಸಿದ್ದಾರೆ. ಅವರು ತನ್ನ ಉಪ ನಾಮವನ್ನು ಮರ್ಲಿನಾದಿಂದ ಸಿಂಗ್ ಎಂದು ಬದಲಾಯಿಸಿಕೊಂಡಿದ್ದಾರೆ ಎಂದು ಹೇಳಿದ್ದರು.
ಕಲ್ಕಾಜಿ ವಿಧಾ ಸಭಾ ಕ್ಷೇತ್ರದ ಹಾಲಿ ಶಾಸಕರಾಗಿರುವ ಆತಿಶಿ ಅವರು ಸ್ವಲ್ಪ ಸಮಯದ ಹಿಂದೆ ತನ್ನ ಉಪ ನಾಮ ಮರ್ಲಿನ್ ಅನ್ನು ಕೈ ಬಿಟಿದ್ದರು.
‘‘ಈ ಮರ್ಲೇನಾ (ಆತಿಶಿ ಮೊದಲು ಬಳಸುತ್ತಿದ್ದ ಉಪನಾಮ) ಈಗ ಸಿಂಗ್ ಆಗಿದ್ದಾರೆ. ಅವರು ತನ್ನ ಹೆಸರು ಬದಲಾಯಿಸಿದ್ದಾರೆ. ಕೇಜ್ರಿವಾಲ್ ತಾನು ಭ್ರಷ್ಟ ಕಾಂಗ್ರೆಸ್ ಜೊತೆ ಹೋಗುವುದಿಲ್ಲ ಎಂಬುದಾಗಿ ತನ್ನ ಮಕ್ಕಳ ಮೇಲೆ ಪ್ರಮಾಣ ಮಾಡಿದ್ದಾರೆ. ಮರ್ಲೇನಾ ತನ್ನ ತಂದೆಯನ್ನೇ ಬದಲಾಯಿಸಿದ್ದಾರೆ. ಮೊದಲು ಅವರು ಮರ್ಲೇನಾ ಆಗಿದ್ದರು. ಈಗ ಅವರು ಸಿಂಗ್ ಆಗಿದ್ದಾರೆ. ಇದು ಅವರ ನಡತೆ’’ ಎಂದು ಬಿದೂರಿ ಹೇಳಿರುವುದಾಗಿ ಪಿಟಿಐ ವರದಿ ಮಾಡಿತ್ತು.
ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿದೂರಿ, ಆತಿಶಿ ಸ್ಪರ್ಧಿಸುವ ಕಲ್ಕಾಜಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.
ಬಿದೂರಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್, ‘‘ಬಿಜೆಪಿ ನಾಯಕರು ನಿರ್ಲಜ್ಜತನದ ಎಲ್ಲ ಎಲ್ಲೆಗಳನ್ನು ಮೀರಿದ್ದಾರೆ. ಬಿಜೆಪಿ ನಾಯಕರು ದಿಲ್ಲಿ ಮುಖ್ಯಮಂತ್ರಿ ಆತಿಶಿ ಜಿ ನಿಂದನೆಯಲ್ಲಿ ತೊಡಗಿದ್ದಾರೆ. ಮಹಿಳಾ ಮುಖ್ಯಮಂತ್ರಿಯೊಬ್ಬರಿಗೆ ಮಾಡಿರುವ ಈ ಅವಮಾನವನ್ನು ದಿಲ್ಲಿಯ ಜನತೆ ಸಹಿಸುವುದಿಲ್ಲ’’ ಎಂಬುದಾಗಿ ಎಕ್ಸ್ನಲ್ಲಿ ಬರೆದಿದ್ದಾರೆ.