Fact-Check | 'ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ' ಎಂದು ಮರಾಠಿ ನಟಿಯ ವೀಡಿಯೋ ತಪ್ಪಾಗಿ ಹಂಚಿಕೊಳ್ಳಲಾಗಿದೆ

ಸಾಮಾಜಿಕ ಮಾಧ್ಯಮ ಬಳಕೆದಾರರು ಇದು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಹಳೆಯ ವೀಡಿಯೋ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. (ಮೂಲ: ಎಕ್ಸ್, ಲಾಜಿಕಲಿ ಫ್ಯಾಕ್ಟ್ಸ್ನಿಂದ ಮಾರ್ಪಡಿಸಲಾಗಿದೆ).
ತೀರ್ಪು (ತಪ್ಪು)
ವೈರಲ್ ಮಹಿಳೆ ಮರಾಠಿ ನಟ ಪಾಯಲ್ ಜಾಧವ್, ಅವರು ಮರಾಠ ರಾಜ ಛತ್ರಪತಿ ಶಿವಾಜಿ ಮಹಾರಾಜರಿಗೆ ಗೌರವಾರ್ಥವಾಗಿ ವೀಡಿಯೊವನ್ನು ಚಿತ್ರೀಕರಿಸಿದ್ದಾರೆ.
ಹೇಳಿಕೆ ಏನು?
ಮಹಿಳೆಯೊಬ್ಬರು ಕೊಳದಿಂದ ನೀರು ಸೇದುತ್ತಿರುವುದನ್ನು, ಯೋಗಾಭ್ಯಾಸ ಮಾಡುತ್ತಿರುವುದನ್ನು ಮತ್ತು ಖಡ್ಗ ಹಾಗು ಕೋಲು ಹಿಡಿಯುತ್ತಿರುವುದನ್ನು ತೋರಿಸುವ ಒಂದು ನಿಮಿಷ, ೫೨ ಸೆಕೆಂಡ್ಗಳ ವೀಡಿಯೋ ಮಾಂಟೇಜ್ ಅನ್ನು ಹಂಚಿಕೊಳ್ಳಲಾಗುತ್ತಿದೆ, ಇದು ಹೊಸದಾಗಿ ಪ್ರಮಾಣ ವಚನ ಸ್ವೀಕರಿಸಿದ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಹಳೆಯ ವೀಡಿಯೋ ಎಂದು ಹೇಳಿಕೊಳ್ಳಲಾಗುತ್ತಿದೆ.
ಅಂತಹ ಒಂದು ಎಕ್ಸ್ ಪೋಷ್ಟ್ ನ ಹಿಂದಿ ಶೀರ್ಷಿಕೆ ಹೀಗಿದೆ: "ಈಗ ದೆಹಲಿಯ ಮುಖ್ಯಮಂತ್ರಿಯಾಗಿರುವ ಆರ್ಎಸ್ಎಸ್ ಕಾರ್ಯಕರ್ತೆ ರೇಖಾ ಗುಪ್ತಾ ಅವರ ಹಳೆಯ ವೀಡಿಯೋ. ನಿಮಗೆ ಶೀತ ಬಂದಿದೆಯೇ? ಕೇಜ್ರಿವಾಲ್, ನಿಮ್ಮಿಂದ ಸಾಧ್ಯವಾದಷ್ಟು ಓಡಿ..." ಪೋಷ್ಟ್ ೧೨೭,೦೦೦ ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ ಮತ್ತು ೩,೭೦೦ ಕ್ಕೂ ಹೆಚ್ಚು ಲೈಕ್ ಗಳನ್ನು ಗಳಿಸಿದೆ. ಇದೇ ರೀತಿಯ ಪೋಷ್ಟ್ ಗಳ ಆರ್ಕೈವ್ಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.
ಇದೇ ರೀತಿಯ ಹೇಳಿಕೆ ಫೇಸ್ಬುಕ್ನಲ್ಲಿ ವ್ಯಾಪಕವಾಗಿ ಹರಡಿವೆ. ಈ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.
ವೈರಲ್ ಪೋಷ್ಟ್ ಗಳ ಸ್ಕ್ರೀನ್ಶಾಟ್ಗಳು (ಮೂಲ: ಫೇಸ್ಬುಕ್/ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್ನಿಂದ ಮಾರ್ಪಡಿಸಲಾಗಿದೆ)
ಫೆಬ್ರವರಿ ೫, ೨೦೨೫ ರಂದು ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಗೆದ್ದ ನಂತರ ಗುಪ್ತಾ ಅವರು ಫೆಬ್ರವರಿ ೨೦, ೨೦೨೫ ರಂದು ದೆಹಲಿಯ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಆದರೆ, ವೀಡಿಯೋದಲ್ಲಿರುವ ಮಹಿಳೆ ಗುಪ್ತಾ ಅಲ್ಲ, ಮರಾಠಿ ನಟಿ ಪಾಯಲ್ ಜಾಧವ್ ಎಂದು ನಾವು ಕಂಡುಕೊಂಡಿದ್ದೇವೆ.
ವಾಸ್ತವಾಂಶಗಳೇನು?
ವೀಡಿಯೋದ ಕೀಫ್ರೇಮ್ಗಳ ರಿವರ್ಸ್ ಇಮೇಜ್ ಸರ್ಚ್ ಮರಾಠಿ ನಟಿ ಪಾಯಲ್ ಜಾಧವ್ ಅವರ ಇನ್ಸ್ಟಾಗ್ರಾಮ್ ಪೋಷ್ಟ್ ಅನ್ನು ಕಂಡುಕೊಂಡೆವು, ಇದನ್ನು ಫೆಬ್ರವರಿ ೧೯, ೨೦೨೫ ರಂದು ಅಪ್ಲೋಡ್ ಮಾಡಲಾಗಿದೆ. ಪೋಷ್ಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ಕಾಣಬಹುದು.
ಮರಾಠಿಯಲ್ಲಿ ಬರೆಯಲಾದ ವೀಡಿಯೋದ ಶೀರ್ಷಿಕೆಯು ಹೀಗೆ ಅನುವಾದಿಸುತ್ತದೆ: "ಛತ್ರಪತಿ ಶಿವಾಜಿ ಮಹಾರಾಜರ ಮಹಾನ್ ಸಾಧನೆಗಳಿಗೆ ವಂದನೆಗಳು. ಇದು ನನ್ನ ಸಣ್ಣ ಪ್ರಯತ್ನ, ಮಹಾನ್ ರಾಜ, ಯುದ್ಧ ಮತ್ತು ಶಸ್ತ್ರಾಸ್ತ್ರಗಳಲ್ಲಿ ಪರಿಣಿತ, ಪ್ರೌಢಪ್ರತಾಪ್ ಪುರಂದರ ಎಂದೂ ಕರೆಯಲ್ಪಡುವ ವೀರ ಯೋಧರಿಂದ ಪ್ರೇರಿತವಾಗಿದೆ."
ಜಾಧವ್ ಫೆಬ್ರವರಿ ೧೯ ರಂದು ಛತ್ರಪತಿ ಶಿವಾಜಿ ಜಯಂತಿಯನ್ನು ಆಚರಿಸಲು ವೀಡಿಯೋವನ್ನು ಪೋಷ್ಟ್ ಮಾಡಿದ್ದಾರೆ, ಇದು ಮಹಾರಾಷ್ಟ್ರದಲ್ಲಿ ಸಾರ್ವಜನಿಕ ರಜಾದಿನವಾಗಿದ್ದು ಮರಾಠ ರಾಜನ ಜನ್ಮ ವಾರ್ಷಿಕೋತ್ಸವವನ್ನು ಆಚರಿಸುತ್ತದೆ.
ಜಾಧವ್ ೨೦೨೩ ರ ಚಲನಚಿತ್ರ ಬಾಪ್ಲಿಯೋಕ್ ಮೂಲಕ ಮರಾಠಿ ಚಲನಚಿತ್ರಗಳಿಗೆ ಪಾದಾರ್ಪಣೆ ಮಾಡಿದರು ಮತ್ತು ಮರಾಠಿ ದೂರದರ್ಶನ ಸರಣಿಯಲ್ಲಿನ ಕೆಲಸಕ್ಕಾಗಿ ಹೆಸರುವಾಸಿಯಾಗಿದ್ದಾರೆ.
ಗುಪ್ತಾ ಅವರ ಫೋಟೋಗಳ ಹೋಲಿಕೆ-೧೯೯೬ ರಲ್ಲಿ ಅವರು ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ಚಿತ್ರ ಸೇರಿದಂತೆ-ವೀಡಿಯೋದಲ್ಲಿರುವ ಮಹಿಳೆ ಅವರನ್ನು ಹೋಲುವುದಿಲ್ಲ ಎಂದು ದೃಢಪಡಿಸುತ್ತದೆ.
ರೇಖಾ ಗುಪ್ತಾ ಅವರೊಂದಿಗೆ ವೈರಲ್ ವೀಡಿಯೋದಲ್ಲಿರುವ ಮಹಿಳೆಯ ಹೋಲಿಕೆ (ಮೂಲ: ಎಕ್ಸ್/rekhagupta.in )
ಅವರ ವೈಯಕ್ತಿಕ ವೆಬ್ಸೈಟ್ ಪ್ರಕಾರ, ಗುಪ್ತಾ ಅವರು ೧೯೯೨ ರಲ್ಲಿ ದೆಹಲಿ ವಿಶ್ವವಿದ್ಯಾಲಯದ ದೌಲತ್ ರಾಮ್ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಗೆ ಸೇರಿದಾಗ ತಮ್ಮ ರಾಜಕೀಯ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ೧೯೯೬ ರಲ್ಲಿ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದರು ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ ಎಸ್ಎಸ್) ಸಕ್ರಿಯ ಸದಸ್ಯರಾಗಿದ್ದರು. ಅವರು ೨೦೨೫ ರ ದೆಹಲಿ ಚುನಾವಣೆಯಲ್ಲಿ ಶಾಲಿಮಾರ್ ಬಾಗ್ ಕ್ಷೇತ್ರದ ಸ್ಥಾನವನ್ನು ಗೆದ್ದರು.
ಆದರೆ, ವೈರಲ್ ಆಗಿರುವ ವೀಡಿಯೋದಲ್ಲಿರುವ ಮಹಿಳೆ ಆಕೆಯಲ್ಲ.
ತೀರ್ಪು
ಮರಾಠಿ ನಟಿ ಪಾಯಲ್ ಜಾಧವ್ ಅವರು ಛತ್ರಪತಿ ಶಿವಾಜಿ ಜಯಂತಿಯಂದು ಕತ್ತಿವರಸೆ ಅಭ್ಯಾಸ ಮಾಡುತ್ತಿರುವ ವೀಡಿಯೋವನ್ನು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ವೀಡಿಯೋ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.
(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)
Read this fact-check in English here.
ಈ ಲೇಖನವನ್ನು ಮೊದಲು 'logicallyfacts.com'ಪ್ರಕಟಿಸಿದೆ. ʼಶಕ್ತಿ ಕಲೆಕ್ಟಿವ್ʼನ ಭಾಗವಾಗಿ ವಾರ್ತಾ ಭಾರತಿ ಪ್ರಕಟಿಸಿದೆ.