ರಮೇಶ್ ಬಿಧೂರಿಯನ್ನು ಸಿಎಂ ಅಭ್ಯರ್ಥಿಯನ್ನಾಗಿಸಲು ಬಿಜೆಪಿ ಯತ್ನಿಸುತ್ತಿದೆ: ದಿಲ್ಲಿ ಸಿಎಂ ಆತಿಶಿ
ಸಿಎಂ ಆತಿಶಿ | PC : PTI
ಹೊಸದಿಲ್ಲಿ: ಮುಂಬರುವ ದಿಲ್ಲಿ ವಿಧಾನಸಭಾ ಚುನಾವಣೆಗೆ ನಿಮ್ಮ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿ ಎಂದು ಶುಕ್ರವಾರ ಬಿಜೆಪಿಗೆ ಸವಾಲು ಹಾಕಿರುವ ದಿಲ್ಲಿ ಮುಖ್ಯಮಂತ್ರಿ ಆತಿಶಿ, ಮಾಜಿ ಸಂಸದ ಹಾಗೂ ಕಲ್ಕಜಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್ ಬಿಧೂರಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಕಲ್ಕಜಿ ವಿಧಾನಸಭಾ ಕ್ಷೇತ್ರ ಅತಿಶಿಯ ತವರು ಕ್ಷೇತ್ರವಾಗಿದೆ.
ಬಿಧೂರಿಯನ್ನು ಮಾನಹಾನಿಕಾರಕ ಭಾಷೆಯಿಂದ ಕುಖ್ಯಾತರಾಗಿರುವ ನಾಯಕ ಎಂದು ಬಣ್ಣಿಸಿದ ಅತಿಶಿ, ತುಘಲಕಾಬಾದ್ ನ ಮೂರು ಬಾರಿಯ ಶಾಸಕ ಹಾಗೂ ಆಪ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಅರವಿಂದ್ ಕೇಜ್ರಿವಾಲ್ ರಂತಹ ಪ್ರಗತಿಪರ, ವೃತ್ತಿಪರ ನಾಯಕ ಬೇಕೊ ಅಥವಾ ದೌರ್ಜನ್ಯಕಾರಿ ವರ್ತನೆಯಿಂದ ಕುಖ್ಯಾತರಾಗಿರುವ ವ್ಯಕ್ತಿ ಬೇಕೇ ಎಂಬುದನ್ನು ದಿಲ್ಲಿಯ ಜನತೆ ನಿರ್ಧರಿಸಬೇಕು ಎಂದು ಮನವಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅತಿಶಿ, “ಇಡೀ ನಗರ ಒಂದು ಸಂಗತಿಯನ್ನು ತಿಳಿದುಕೊಳ್ಳಬೇಕಿದೆ: ಬೈಗುಳ ಹರಡುವ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಯಾರು? ಆಪ್ ಈಗಾಗಲೇ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಪ್ರಕಟಿಸಿದೆ. ಆಪ್ ಪಕ್ಷಕ್ಕೆ ಮತ ಚಲಾಯಿಸಿದರೆ, ಅರವಿಂದ್ ಕೇಜ್ರಿವಾಲ್ ಮುಖ್ಯಮಂತ್ರಿಯಾಗುತ್ತಾರೆ ಎಂಬುದು ಜನಕ್ಕೆ ತಿಳಿದಿದೆ. ಆದರೆ, ಅವರು ಬೈಗುಳ ಹರಡುವ ಪಕ್ಷಕ್ಕೆ ಮತ ಚಲಾಯಿಸಿದರೆ, ಅವರ ಮುಖ್ಯಮಂತ್ರಿ ಅಭ್ಯರ್ಥಿ ಯಾರು?” ಎಂದು ಪ್ರಶ್ನಿಸಿದರು.
“ಬೈಗುಳ ಹರಡುವ ಪಕ್ಷವು ತೀವ್ರ ಮಾನಹಾನಿಕಾರ ಭಾಷೆಯನ್ನು ಬಳಸುವ ರಮೇಶ್ ಬಿಧೂರಿಯನ್ನು ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿಸಲು ನಿರ್ಧರಿಸಿದೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ. ನಾಳೆ ಅವರು ತಮ್ಮ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಬಹುದು ಹಾಗೂ ಎರಡ್ಮೂರು ದಿನಗಳಲ್ಲಿ ರಮೇಶ್ ಬಿಧೂರಿಯನ್ನು ತಮ್ಮ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಪ್ರಕಟಿಸಬಹುದು” ಎಂದು ಅತಿಶಿ ಆರೋಪಿಸಿದ್ದಾರೆ.