ಸೇನೆ ಕುರಿತು ಶೆಹ್ಲಾ ರಶೀದ್ ಟ್ವೀಟ್: ಪ್ರಕರಣ ಹಿಂಪಡೆಯಲು ಪೊಲೀಸರಿಗೆ ದಿಲ್ಲಿ ನ್ಯಾಯಾಲಯದ ಅನುಮತಿ

ಶೆಹ್ಲಾ ರಶೀದ್ | PTI
ದಿಲ್ಲಿ: ಸೇನೆ ಕುರಿತು ಮಾಡಿದ್ದ ಟ್ವೀಟ್ ಗಳ ಸಂಬಂಧ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ಮಾಜಿ ಉಪಾಧ್ಯಕ್ಷೆ ಶೆಹ್ಲಾ ರಶೀದ್ ರಶೀದ್ ಶೋರಾ ವಿರುದ್ಧ ದಾಖಲಿಸಿಕೊಳ್ಳಲಾಗಿದ್ದ ಪ್ರಕರಣಗಳನ್ನು ಹಿಂಪಡೆಯಲು ಇಲ್ಲಿನ ನ್ಯಾಯಾಲಯವೊಂದು ದಿಲ್ಲಿ ಪೊಲೀಸರಿಗೆ ಅನುಮತಿ ನೀಡಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಶೆಹ್ಲಾ ರಶೀದ್ ಶೋರಾರನ್ನು ಪ್ರಾಸಿಕ್ಯೂಶನ್ ಗೆ ಒಳಪಡಿಸಲು ತಾವು ನೀಡಿದ್ದ ಅನುಮತಿಯನ್ನು ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಹಿಂಪಡೆದಿದ್ದಾರೆ ಎಂದು ಪ್ರಾಸಿಕ್ಯೂಶನ್ ಪರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿದ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಅನುಜ್, ಫೆಬ್ರವರಿ 27ರಂದು ದಿಲ್ಲಿ ಪೊಲೀಸರಿಗೆ ಪ್ರಕರಣ ಹಿಂಪಡೆಯಲು ಅನುಮತಿ ನೀಡಿ ಆದೇಶ ಹೊರಡಿಸಿದ್ದಾರೆ.
ಪ್ರಾಸಿಕ್ಯೂಶನ್ ಸಲ್ಲಿಸಿದ್ದ ಅರ್ಜಿಯ ಪ್ರಕಾರ, ಪರಿಶೀಲನಾ ಸಮಿತಿಯ ಶಿಫಾರಸಿನಂತೆ ಲೆಫ್ಟಿನೆಂಟ್ ಗವರ್ನರ್ ಈ ಆದೇಶ ಹೊರಡಿಸಿದ್ದಾರೆ ಎನ್ನಲಾಗಿದೆ. “ಪರಿಶೀಲನಾ ಸಮಿತಿಯ ಶಿಫಾರಸಿಗೆ ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ ಅನುಮೋದನೆ ನೀಡಿದ್ದಾರೆ” ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಡಿಸೆಂಬರ್ 23, 2024ರಂದು ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಈ ಅನುಮೋದನೆ ನೀಡಿದ್ದಾರೆ.
ಎರಡು ವಿಭಿನ್ನ ಗುಂಪುಗಳ ನಡುವೆ ದ್ವೇಷವನ್ನು ಪ್ರಚೋದಿಸುತ್ತಿದ್ದು, ತಮ್ಮ ಟ್ವೀಟ್ ಗಳ ಮೂಲಕ ಸೌಹಾರ್ದತೆಗೆ ಧಕ್ಕೆ ತರುವ ಪೂರ್ವಗ್ರಹಪೀಡಿತ ಕೃತ್ಯದಲ್ಲಿ ನಿರತರಾಗಿದ್ದಾರೆ ಎಂಬ ಆರೋಪವನ್ನು ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ನಾಯಕಿ ಶೆಹ್ಲಾ ರಶೀದ್ ಶೋರಾ ಎದುರಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ಸೇನೆಯು ಕಾಶ್ಮೀರದಲ್ಲಿ ಮನೆಗಳಿಗೆ ನುಗ್ಗಿ, ಸ್ಥಳೀಯರಿಗೆ ಕಿರುಕುಳ ನೀಡುತ್ತಿದೆ ಎಂದು ಆಗಸ್ಟ್ 18, 2019ರ ತಮ್ಮ ಟ್ವೀಟ್ ಗಳಲ್ಲಿ ಶೆಹ್ಲಾ ರಶೀದ್ ಶೋರಾ ಆರೋಪಿಸಿದ್ದರು. ಈ ಆರೋಪಗಳು ನಿರಾಧಾರ ಎಂದು ಸೇನೆ ಅಲ್ಲಗಳೆದಿತ್ತು.