ಮಾನನಷ್ಟ ಮೊಕದ್ದಮೆ: ʼಸುದರ್ಶನ್ ನ್ಯೂಸ್ʼ ಮುಖ್ಯಸ್ಥ ಸುರೇಶ್ ಚವ್ಹಾಂಕೆ ಸೇರಿ 6 ಆರೋಪಿಗಳಿಗೆ ದಿಲ್ಲಿ ಕೋರ್ಟ್ ಸಮನ್ಸ್
ಸುರೇಶ್ ಚವ್ಹಾಂಕೆ (Photo credit: aajtak.in)
ಹೊಸದಿಲ್ಲಿ: ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿ ಸುದರ್ಶನ್ ಟಿವಿ ಮತ್ತು ಸುದರ್ಶನ್ ನ್ಯೂಸ್ ಮುಖ್ಯಸ್ಥ ಸುರೇಶ್ ಚವ್ಹಾಂಕೆ ಸೇರಿದಂತೆ 6 ಆರೋಪಿಗಳಿಗೆ ದಿಲ್ಲಿ ನ್ಯಾಯಾಲಯ ಸಮನ್ಸ್ ನೀಡಿದೆ.
ಮೊಹಮ್ಮದ್ ತುಫೈಲ್ ಖಾನ್ ಎಂಬವರು ದಾಖಲಿಸಿದ್ದ ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿ ಈ ಸಮನ್ಸ್ ನೀಡಲಾಗಿದೆ. ತುಫೈಲ್ ಖಾನ್ ಜಾಮಿಯಾ ಅರೇಬಿಯಾ ನಿಜಾಮಿಯಾ ವೆಲ್ಫೇರ್ ಎಜುಕೇಷನಲ್ ಸೊಸೈಟಿ ಎಂಬ ಮದರಸಾ ಮತ್ತು ಎನ್ ಜಿಒವನ್ನು ನಡೆಸುತ್ತಿದ್ದರು. ತಮ್ಮ ಸಂಸ್ಥೆಯು 70 ಅನಾಥರಿಗೆ ಆಶ್ರಯ ಮತ್ತು ಶಿಕ್ಷಣವನ್ನು ಒದಗಿಸುತ್ತದೆ ಎಂದು ಖಾನ್ ಹೇಳಿದ್ದಾರೆ.
2022ರಲ್ಲಿ ಮುಫ್ತಿ ವಜಾಹತ್ ಖಾಸ್ಮಿ, ಜಾಮಿಯಾ ಅರೇಬಿಯಾ ನಿಜಾಮಿಯಾ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ ಎಂದು ಆರೋಪಿಸಿದ್ದರು. ಈ ಕುರಿತ ಸಂದರ್ಶನವನ್ನು ಸುದರ್ಶನ್ ಟಿವಿ ಪ್ರಸಾರ ಮಾಡಿತ್ತು.
ಈ ಬಗ್ಗೆ ತುಫೈಲ್ ಖಾನ್, ಸುದರ್ಶನ್ ಟಿವಿ, ಖಾಸ್ಮಿ, ಸುದರ್ಶನ್ ನ್ಯೂಸ್ ಮುಖ್ಯಸ್ಥ ಸುರೇಶ್ ಚವ್ಹಾಂಕೆ ಸೇರಿ ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಅ.19ರಂದು, ದಿಲ್ಲಿಯ ಸಾಕೇತ್ ನ್ಯಾಯಾಲಯದ ನ್ಯಾಯಾಧೀಶ ಕಾರ್ತಿಕ್ ತಪರಿಯಾ, ಪ್ರಕರಣದ 7 ಆರೋಪಿಗಳಿಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್ ನೀಡಿದ್ದಾರೆ.