ಅತ್ಯಾಚಾರ, ಕ್ರಿಮಿನಲ್ ಬೆದರಿಕೆ ಆರೋಪ: ಬಿಜೆಪಿ ನಾಯಕ ಶಾನವಾಝ್ ಗೆ ಸಮನ್ಸ್
Photo : twitter
ಹೊಸದಿಲ್ಲಿ : ಅತ್ಯಾಚಾರ ಹಾಗೂ ಕ್ರಿಮಿನಲ್ ಬೆದರಿಕೆ ಹಾಕಿದ್ದಾರೆಂದು ಬಿಜೆಪಿ ನಾಯಕ ಸೈಯದ್ ಶಾನವಾಝ್ ಹುಸೈನ್ ವಿರುದ್ಧ ಮಹಿಳೆಯೊಬ್ಬರು ದೂರು ನೀಡಿರುವ ಹಿನ್ನೆಲೆಯಲ್ಲಿ ಅವರಿಗೆ ದಿಲ್ಲಿ ನ್ಯಾಯಾಲಯವು ಬುಧವಾರ ಸಮನ್ಸ್ ಜಾರಿಗೊಳಿಸಿದೆ.
ಅ. 20ರಂದು ನ್ಯಾಯಾಲಯದ ಮುಂದೆ ಹಾಜರಾಗುವಂತೆ ರೋಸ್ ಅವೆನ್ಯೂ ಕೋರ್ಟ್ ನ ಹೆಚ್ಚುವರಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ವೈಭವ ಮೆಹ್ತಾ ಅವರು ಸೈಯದ್ ಶಾನವಾಝ್ ಹುಸೈನ್ ಅವರಿಗೆ ಸೂಚಿಸಿದ್ದಾರೆ. ಬಿಜೆಪಿ ನಾಯಕನ ವಿರುದ್ಧ ಮಾಡಲಾದ ಆರೋಪಗಳಿಗೆ ಸಂಬಂಧಿಸಿ ಯಾವುದೇ ಪ್ರಕರಣ ದಾಖಲಿಸಿಲ್ಲವೆಂಬ ದಿಲ್ಲಿ ಪೊಲೀಸರ ವರದಿಯನ್ನು ಅವರು ತಳ್ಳಿಹಾಕಿದರು.
ಪ್ರಕರಣವನ್ನು ರದ್ದುಪಡಿಸಿರುವ ಪೊಲೀಸ್ ವರದಿಯನ್ನು ವಿರೋಧಿಸಿ ಸಂತ್ರಸ್ತ ಮಹಿಳೆಯು ನ್ಯಾಯಾಲಯದ ಮೆಟ್ಟಲೇರಿದ್ದರು.
‘‘ತನಗೆ ಅಮಲು ಪದಾರ್ಥ ನೀಡಿ, ಅತ್ಯಾಚಾರವೆಸಲಾಗಿದೆಯೆಂದು ಮಹಿಳೆಯೊಬ್ಬರು ಪೊಲೀಸರು ಹಾಗೂ ನ್ಯಾಯಾಲಯದ ಮುಂದೆ ಪದೇ ಪದೇ ಹೇಳಿಕೊಂಡಿದ್ದಾಳೆ. ಆಕೆ ಅತ್ಯಾಚಾರಕ್ಕೊಳಗಾಗಿರುವ ಸಾಧ್ಯತೆಯಿಲ್ಲವೆಂದು ತನಿಖಾಧಿಕಾರಿಯು ಸೂಕ್ತ ಪುರಾವೆಗಳೊಂದಿಗೆ ದೃಢಪಡಿಸದೆ ಇದ್ದಲ್ಲಿ, ಈ ಪ್ರಕರಣವನ್ನು ತಿರಸ್ಕರಿಸಲು ನ್ಯಾಯಾಲಯಕ್ಕೆ ಯಾವುದೇ ಕಾರಣಗಳಿಲ್ಲ’’ ಎಂದು ನ್ಯಾಯಾಧೀಶರು ತನ್ನ ಆದೇಶದಲ್ಲಿ ತಿಳಿಸಿದ್ದಾರೆ.
ದೂರುದಾರಳು ಪೊಲೀಸರಿಗೆ ಸ್ಥಿರವಾದ ಹೇಳಿಕೆಗಳನ್ನು ನೀಡುತ್ತಾ ಬಂದಿರುವುದನ್ನು ಕೂಡಾ ನ್ಯಾಯಾಲಯ ಗಮನಕ್ಕೆ ತೆಗೆದುಕೊಂಡಿರುವುದಾಗಿ ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ.