ದಿಲ್ಲಿ: ದಟ್ಟ ಮಂಜಿನಿಂದಾಗಿ ವಿಮಾನಯಾನಗಳು, ರೈಲುಗಳ ಸಂಚಾರದಲ್ಲಿ ವ್ಯತ್ಯಯ
ಸಾಂದರ್ಭಿಕ ಚಿತ್ರ / Photo:NDTV
ಹೊಸದಿಲ್ಲಿ: ತೀವ್ರ ಚಳಿ ಮತ್ತು ಮಂಜಿನಿಂದಾಗಿ ದಿಲ್ಲಿ ಬುಧವಾರ ತತ್ತರಿಸಿದ್ದು,ವಿಮಾನ ಮತ್ತು ರೈಲುಸೇವೆಗಳಲ್ಲಿ ವ್ಯತ್ಯಯವುಂಟಾಗಿತ್ತು. ರೈಲು ನಿಲ್ದಾಣಗಳು ಮತ್ತು ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಾವಿರಾರು ಪ್ರಯಾಣಿಕರು ಅತಂತ್ರರಾಗಿದ್ದರು.
ರಾಷ್ಟ್ರ ರಾಜಧಾನಿಯಲ್ಲಿ ಕನಿಷ್ಠ ತಾಪಮಾನ 10 ಡಿಗ್ರಿ.ಸೆ. ಗೆ ಕುಸಿದಿತ್ತು. ದಟ್ಟ ಮಂಜಿನಿಂದಾಗಿ ಪಂಜಾಬ್ ,ಹರ್ಯಾಣ, ಭಾಗಶಃ ಉತ್ತರ ಪ್ರದೇಶ, ಬಿಹಾರ ಮತ್ತು ಒಡಿಶಾಗಳಲ್ಲೂ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಕರಾವಳಿ ಆಂಧ್ರಪ್ರದೇಶದಲ್ಲಿಯೂ ಮಂಜು ಬಿದ್ದಿತ್ತು.
ಪ್ರತಿಕೂಲ ಹವಾಮಾನ ಫೆ.3ರವರೆಗೂ ಮುಂದುವರಿಯುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ತಿಳಿಸಿದೆ.
ದಿಲ್ಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಳಿಗ್ಗೆ 6:30ಕ್ಕೆ ದಟ್ಟವಾದ ಮಂಜು ಆವರಿಸಿದ್ದರಿಂದ ಗೋಚರತೆ ಶೂನ್ಯಕ್ಕಿಳಿದಿತ್ತು. ಬೆಳಿಗ್ಗೆ ಒಂಭತ್ತು ಗಂಟೆಯವರೆಗೂ ಇದೇ ಸ್ಥಿತಿ ಮುಂದುವರಿದಿತ್ತು. ಪ್ರತಿಕೂಲ ಹವಾಮಾನದಿಂದಾಗಿ ದಿಲ್ಲಿಗೆ ಬರುತ್ತಿದ್ದ ಮೂರು ವಿಮಾನಗಳನ್ನು ಬೇರೆ ಕಡೆಗೆ ತಿರುಗಿಸಲಾಗಿತ್ತು ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು.
ದಟ್ಟ ಮಂಜಿನಿಂದಾಗಿ ಹಲವಾರು ರೈಲುಗಳು ವಿಳಂಬವಾಗಿ ಸಂಚರಿಸುತ್ತಿವೆ ಎಂದು ಇನ್ನೋರ್ವ ಅಧಿಕಾರಿ ತಿಳಿಸಿದರು.