ಅರ್ಧದಷ್ಟು ಸರಕಾರಿ ಸಿಬ್ಬಂದಿಗೆ ಮನೆಯಿಂದಲೇ ಕೆಲಸ : ದಿಲ್ಲಿ ಪರಿಸರ ಸಚಿವ ಗೋಪಾಲ ರೈ
ಗೋಪಾಲ ರೈ | PC : ANI
ಹೊಸದಿಲ್ಲಿ : ದಿಲ್ಲಿಯಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯದ ಹಿನ್ನೆಲೆಯಲ್ಲಿ, ದಿಲ್ಲಿ ಸರಕಾರದ ಅರ್ಧದಷ್ಟು ಸಿಬ್ಬಂದಿ ಮನೆಯಿಂದಲೇ ಕೆಲಸ ಮಾಡಲಿದ್ದಾರೆ ಎಂದು ರಾಜ್ಯದ ಪರಿಸರ ಸಚಿವ ಗೋಪಾಲ ರೈ ಬುಧವಾರ ತಿಳಿಸಿದ್ದಾರೆ.
‘‘ಸರಕಾರಿ ಕಚೇರಿಗಳ 50 ಶೇಕಡ ಸಿಬ್ಬಂದಿ ಮನೆಯಿಂದ ಕೆಲಸ ಮಾಡಲಿದ್ದಾರೆ. ಈ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು’’ ಎಂದು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಹಾಕಿದ ಸಂದೇಶವೊಂದರಲ್ಲಿ ಅವರು ಹೇಳಿದ್ದಾರೆ.
ಇದಕ್ಕೂ ಮೊದಲು, ದಿಲ್ಲಿ ಸರಕಾರವು ತನ್ನ ಮತ್ತು ದಿಲ್ಲಿ ಮಹಾನಗರ ಪಾಲಿಕೆಯ ಕಚೇರಿಗಳಿಗೆ ಭಿನ್ನ ಸಮಯಗಳನ್ನು ನಿಗದಿಪಡಿಸಿತ್ತು.
ದಿಲ್ಲಿ ಮಹಾನಗರ ಪಾಲಿಕೆ (ಎಮ್ಸಿಡಿ)ಯ ಸಮಯವನ್ನು ಬೆಳಗ್ಗೆ 8:30ರಿಂದ ಸಂಜೆ 5 ಗಂಟೆಯವರೆಗೆ ನಿಗದಿಪಡಿಸಲಾಗಿದ್ದರೆ, ದಿಲ್ಲಿ ಸರಕಾರದ ಕಚೇರಿಗಳ ಸಮಯವನ್ನು ಬೆಳಗ್ಗೆ 10ರಿಂದ ಸಂಜೆ 6:30ರವರೆಗೆ ನಿಗದಿಪಡಿಸಲಾಗಿತ್ತು.
Next Story