ದಿಲ್ಲಿ ಅಬಕಾರಿ ನೀತಿ ಪ್ರಕರಣ | ಸುಪ್ರೀಂ ಕೋರ್ಟ್ನಿಂದ ದಿಲ್ಲಿಯ ಉದ್ಯಮಿಗೆ ಜಾಮೀನು ಮಂಜೂರು
ಸುಪ್ರೀಂ ಕೋರ್ಟ್| PTI
ಹೊಸದಿಲ್ಲಿ : ಸರ್ವೋಚ್ಚ ನ್ಯಾಯಾಲಯವು ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ದಿಲ್ಲಿಯ ಉದ್ಯಮಿ ಅಮನದೀಪ್ ಸಿಂಗ್ ಧಾಲ್ಗೆ ಶುಕ್ರವಾರ ಜಾಮೀನು ಮಂಜೂರು ಮಾಡಿದೆ.
ತನಗೆ ಜಾಮೀನು ನೀಡಲು ನಿರಾಕರಿಸಿದ್ದ ದಿಲ್ಲಿ ಉಚ್ಚ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಧಾಲ್ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು ಜಾಮೀನು ಮಂಜೂರು ಮಾಡಿ ಆದೇಶಿಸಿತು.
ಸಿಬಿಐ ಸುಮಾರು 300 ಸಾಕ್ಷಿಗಳನ್ನು ಪ್ರಶ್ನಿಸಬೇಕಿದೆ ಮತ್ತು ವಿಚಾರಣೆ ಇನ್ನೂ ಆರಂಭಗೊಳ್ಳಬೇಕಿದೆ. ಅಲ್ಲದೆ ಧಾಲ್ ಒಂದು ವರ್ಷಕ್ಕೂ ಅಧಿಕ ಸಮಯದಿಂದ ಬಂಧನದಲ್ಲಿದ್ದಾರೆ ಮತ್ತು ಇತರ ಆರೋಪಿಗಳನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಗಿದೆ ಎನ್ನುವುದನ್ನು ಗಮನಕ್ಕೆ ತೆಗೆದುಕೊಂಡ ಸರ್ವೋಚ್ಚ ನ್ಯಾಯಾಲಯವು, ವಿಚಾರಣಾಧೀನ ನ್ಯಾಯಾಲಯದ ಷರತ್ತುಗಳಿಗೆ ಒಳಪಟ್ಟು ಧಾಲ್ಗೆ ಜಾಮೀನು ಮಂಜೂರು ಮಾಡಿತು.
ಧಾಲ್ ಅಬಕಾರಿ ನೀತಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷದ ಎಪ್ರಿಲ್ನಲ್ಲಿ ಸಿಬಿಐನಿಂದ ಬಂಧಿಸಲ್ಪಟ್ಟಿದ್ದರು. ಅಬಕಾರಿ ನೀತಿ ಹಗರಣ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಪ್ರತ್ಯೇಕವಾಗಿ ದಾಖಲಿಸಿಕೊಂಡಿರುವ ಎರಡು ಪ್ರಕರಣಗಳಲ್ಲಿ ಧಾಲ್ ಆರೋಪಿಯಾಗಿದ್ದಾರೆ.