ದಿಲ್ಲಿ ಅಬಕಾರಿ ನೀತಿ ಪ್ರಕರಣ ; ಬಿ ಆರ್ ಎಸ್ ನಾಯಕಿ ಕವಿತಾಗೆ ಈ.ಡಿ. ಸಮನ್ಸ್
ಕೆ. ಕವಿತಾ | Photo: PTI
ಹೊಸದಿಲ್ಲಿ : ದಿಲ್ಲಿ ಅಬಕಾರಿ ನೀತಿಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನ್ನ ತನಿಖೆಗೆ ಸಂಬಂಧಿಸಿ ಹೊಸ ಸುತ್ತಿನ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಬಿ ಆರ್ ಎಸ್ ನಾಯಕಿ ಕೆ. ಕವಿತಾ ಅವರಿಗೆ ಸಮನ್ಸ್ ಜಾರಿ ಮಾಡಿದೆ ಎಂದು ಅಧಿಕೃತ ಮೂಲಗಳು ಸೋಮವಾರ ತಿಳಿಸಿವೆ.
ದಿಲ್ಲಿಯಲ್ಲಿರುವ ಜಾರಿ ನಿರ್ದೇಶನಾಲಯದ ಕಚೇರಿಯಲ್ಲಿ ಮಂಗಳವಾರ ಹಾಜರಾಗುವಂತೆ ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ. ಕವಿತಾ ಅವರಿಗೆ ನಿರ್ದೇಶಿಸಲಾಗಿದೆ ಎಂದು ಅವು ತಿಳಿಸಿವೆ.
ಆದರೆ, ಅವರು ಜಾರಿ ನಿರ್ದೇಶನಾಲಯದ ಮುಂದೆ ವಿಚಾರಣೆಗೆ ಹಾಜರಾಗಲಾರರು. ಅವರು ತಮ್ಮ ನಿರ್ಧಾರವನ್ನು ಇಮೇಲ್ ಮೂಲಕ ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ ಎಂದು ಅವು ತಿಳಿಸಿವೆ.
ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಕೆ. ಕವಿತಾ ಅವರಿಗೆ ಸಮನ್ಸ್ ನೀಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ ಎಂದು ಕವಿತಾ ಅವರ ವಕೀಲ ನಿತೇಶ್ ರಾಣಾ ತಿಳಿಸಿದ್ದಾರೆ.
ಕವಿತಾ ಅವರು ಸುಪ್ರೀಂ ಕೋರ್ಟ್ ನಿಂದ ಕಳೆದ ವರ್ಷ ತಾತ್ಕಾಲಿಕ ಪರಿಹಾರ ಪಡೆದುಕೊಂಡಿದ್ದರು. ಆದರೆ, ಅದು ಈಗ ಮಾನ್ಯವಲ್ಲ ಎಂದು ಜಾರಿ ನಿರ್ದೇಶನಾಲಯದ ಮೂಲಗಳು ತಿಳಿಸಿವೆ.
ಈ ಪ್ರಕರಣದಲ್ಲಿ ಕಳೆದ ವರ್ಷ ಕವಿತಾ ಅವರನ್ನು ಮೂರು ಬಾರಿ ವಿಚಾರಣೆಗೆ ಒಳಪಡಿಸಲಾಗಿತ್ತು. ಜಾರಿ ನಿರ್ದೇಶನಾಲಯ ಅವರ ಹೇಳಿಕೆಗಳನ್ನು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ದಾಖಲಿಸಿಕೊಂಡಿತ್ತು ಎಂದು ಅಧಿಕೃತ ಮೂಲಗಳು ತಿಳಿಸಿವೆ.