ಮಿತಿ ಮೀರಿದ ವಾಯು ಮಾಲಿನ್ಯ: ಶೇ. 50ರಷ್ಟು ನೌಕರರಿಗೆ ಮನೆಯಿಂದಲೇ ಕಾರ್ಯನಿರ್ವಹಿಸಲು ಸೂಚಿಸಿದ ದಿಲ್ಲಿ ಸರಕಾರ
Photo: PTI
ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿನ ವಾಯು ಮಾಲಿನ್ಯ ಪ್ರಮಾಣವು ಗಂಭೀರ ಸ್ವರೂಪದಲ್ಲಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ, ತನ್ನ ಶೇ.50ರಷ್ಟು ನೌಕರರಿಗೆ ಮನೆಯಿಂದಲೇ ಕಾರ್ಯನಿರ್ವಹಿಸುವಂತೆ ಆಪ್ ಸರಕಾರ ಆದೇಶಿಸಿದೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ದಿಲ್ಲಿ ಪರಿಸರ ಸಚಿವ ಗೋಪಾಲ್ ರಾಯ್, “ಮಾಲಿನ್ಯವನ್ನು ತಗ್ಗಿಸಲು ಸರಕಾರಿ ಕಚೇರಿಗಳಲ್ಲಿ ಮನೆಯಿಂದಲೇ ಕಾರ್ಯನಿರ್ವಹಿಸುವ ನೀತಿಯನ್ನು ಜಾರಿಗೊಳಿಸಲು ದಿಲ್ಲಿ ಸರಕಾರ ನಿರ್ಧರಿಸಿದೆ. ಅದರ ಜಾರಿಗಾಗಿ, ಇಂದು ಮಧ್ಯಾಹ್ನ ಒಂದು ಗಂಟೆಗೆ ವಿಧಾನಸಭಾ ಕಾರ್ಯಾಲಯದಲ್ಲಿ ಅಧಿಕಾರಿಗಳೊಂದಿಗೆ ಸಭೆ ಹಮ್ಮಿಕೊಳ್ಳಲಾಗಿದೆ” ಎಂದು ಹೇಳಿದ್ದಾರೆ.
ಬುಧವಾರ ಬೆಳಗ್ಗೆ ದಿಲ್ಲಿಯ ವಾಯು ಗುಣಮಟ್ಟ ಗಂಭೀರ ಪ್ರವರ್ಗಕ್ಕೆ ಸೇರ್ಪಡೆಯಾಗಿದ್ದು, ವಾಯು ಗುಣಮಟ್ಟ ಸೂಚ್ಯಂಕ ಪ್ರಮಾಣವು 422ರಷ್ಟಿದೆ.
ದಿಲ್ಲಿಯಲ್ಲಿನ ತೀವ್ರ ಸ್ವರೂಪದ ವಾಯು ಮಾಲಿನ್ಯದ ಹಿನ್ನೆಲೆಯಲ್ಲಿ, ಸರಕಾರಿ ನೌಕರರ ಕಚೇರಿ ಅವಧಿಯನ್ನು ಕಡಿತಗೊಳಿಸಿ ಮಂಗಳವಾರ ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಆದೇಶಿಸಿದ್ದರು. ಇದರನ್ವಯ, ದಿಲ್ಲಿ ಸರಕಾರ ಮತ್ತು ದಿಲ್ಲಿ ಮಹಾನಗರ ಪಾಲಿಕೆಯ ಎಲ್ಲ ಕಚೇರಿಗಳೂ ಪರಿಷ್ಕೃತ ವೇಳಾಪಟ್ಟಿಯಂತೆ ಕಾರ್ಯನಿರ್ವಹಿಸಲಿವೆ. ದಿಲ್ಲಿ ಮಹಾನಗರ ಪಾಲಿಕೆ ಕಚೇರಿಗಳು ಬೆಳಗ್ಗೆ 8.30ರಿಂದ ಸಂಜೆ 5 ಗಂಟೆವರೆಗೆ ಕಾರ್ಯನಿರ್ವಹಿಸಲಿದ್ದರೆ, ದಿಲ್ಲಿ ಸರಕಾರಿ ಕಚೇರಿಗಳು ಬೆಳಗ್ಗೆ 10 ಗಂಟೆಯಿಂದ ಸಂಜೆ 6.30ರವರೆಗೆ ಕಾರ್ಯನಿರ್ವಹಿಸಲಿವೆ. ಈ ಆದೇಶವು ಫೆಬ್ರವರಿ 28, 2025ರವರೆಗೆ ಜಾರಿಯಲ್ಲಿರುತ್ತದೆ.