ಘನ ವಾಹನಗಳ ಪ್ರವೇಶ ತಡೆಯಲು ದಿಲ್ಲಿ ಸರಕಾರ, ಪೊಲೀಸ್ ವಿಫಲ : ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯನ್ನು ಪ್ರವೇಶಿಸುವ ಘನ ವಾಹನಗಳಿಗೆ ಸಂಬಂಧಿಸಿದ ಹಂತವಾರು ಸ್ಪಂದನಾ ಕ್ರಿಯಾ ಯೋಜನೆ (ಜಿಆರ್ಎಪಿ)- 4ರ ನಿರ್ಬಂಧಗಳನ್ನು ಜಾರಿಗೊಳಿಸಲು ದಿಲ್ಲಿ ಸರಕಾರ ಮತ್ತು ದಿಲ್ಲಿ ಪೊಲೀಸ್ ವಿಫಲವಾಗಿದೆ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.
ದಿಲ್ಲಿ-ರಾಷ್ಟ್ರ ರಾಜಧಾನಿ ವಲಯ (ಎನ್ಸಿಆರ್)ದಲ್ಲಿ ವಾಯು ಮಾಲಿನ್ಯವನ್ನು ನಿಯಂತ್ರಿಸಲು ನಿರ್ದೇಶನಗಳನ್ನು ನೀಡಬೇಕು ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ಶುಕ್ರವಾರ ಮುಂದುವರಿಸಿತು.
ಈ ವಾರದ ಆರಂಭದಲ್ಲಿ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ)ವು ‘ಸೀವಿಯರ್ ಪ್ಲಸ್’ ದರ್ಜೆಗೆ ಕುಸಿದಿತ್ತು. ಜಿಆರ್ಎಪಿ-4ನೇ ಹಂತದಲ್ಲಿ ದಿಲ್ಲಿಗೆ ಟ್ರಕ್ಗಳ ಪ್ರವೇಶವನ್ನು ನಿರ್ಬಂಧಿಸಲಾಗುತ್ತದೆ ಮತ್ತು ಸಾರ್ವಜನಿಕ ಯೋಜನೆಗಳ ನಿರ್ಮಾಣ ಕಾಮಗಾರಿಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗುತ್ತದೆ.
ಘನ ವಾಹನಗಳ ದಿಲ್ಲಿ ಪ್ರವೇಶಕ್ಕೆ ಅನುಮತಿ ನೀಡಲಾಗಿದೆಯೇ ಎನ್ನುವುದನ್ನು ಪರಿಶೀಲಿಸಲು ಎಲ್ಲಾ 13 ಪ್ರಮುಖ ಪ್ರವೇಶ ಸ್ಥಳಗಳ ಸಿಸಿಟಿವಿ ದೃಶ್ಯಗಳನ್ನು ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ದಿಲ್ಲಿ ಸರಕಾರಕ್ಕೆ ಸೂಚನೆ ನೀಡಿತು.
ದಿಲ್ಲಿಯಿಂದ ಹೊರಗೆ ನೋಂದಾಯಿಸಲ್ಪಟ್ಟಿರುವ ಹಾಗೂ ಅಗತ್ಯ ವಸ್ತುಗಳು ಇರದ ಘನ ವಾಹನಗಳು ಮತ್ತು ಲಘು ವಾಣಿಜ್ಯ ವಾಹನಗಳಿಗೆ ದಿಲ್ಲಿ ಪ್ರವೇಶಿಸಲು ಅವಕಾಶ ನೀಡಲಾಗುತ್ತಿದೆಯೇ ಎನ್ನುವುದನ್ನು ತಿಳಿಯುವುದಕ್ಕಾಗಿ 13 ಪ್ರವೇಶ ಸ್ಥಳಗಳಿಗೆ ಭೇಟಿ ನೀಡಿ ವರದಿ ಸಲ್ಲಿಸಲು ಸುಪ್ರೀಂ ಕೋರ್ಟ್ 13 ವಕೀಲರನ್ನು ನೇಮಿಸಿದೆ. ನವೆಂಬರ್ 25ರೊಳಗೆ ವರದಿ ಸಲ್ಲಿಸುವಂತೆ ಅವರಿಗೆ ಸೂಚಿಸಿದೆ.
‘‘ದಿಲ್ಲಿಗೆ ಟ್ರಕ್ಗಳ ಪ್ರವೇಶವನ್ನು ನಿಲ್ಲಿಸಲಾಗಿದೆ ಎನ್ನುವುದನ್ನು ನಂಬಲು ನಮಗೆ ಕಷ್ಟವಾಗುತ್ತಿದೆ’’ ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕ ಮತ್ತು ಆಗಸ್ಟಿನ್ ಜಾರ್ಜ್ ಮಸಿಹ್ ಅವರನ್ನು ಒಳಗೊಂಡ ನ್ಯಾಯಪೀಠವೊಂದು ಹೇಳಿತು. ದಿಲ್ಲಿಗೆ ಟ್ರಕ್ಗಳ ಪ್ರವೇಶವನ್ನು ತಡೆಯಲು ಎಲ್ಲಾ 13 ಪ್ರವೇಶ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜಿಸುವಂತೆ ಅದು ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಿತು ಮತ್ತು ಸೋಮವಾರದ ಒಳಗೆ ವರದಿ ಸಲ್ಲಿಸುವಂತೆ ಸೂಚಿಸಿತು.
ಮುಂದಿನ ವಿಚಾರಣೆ ಸೋಮವಾರ ನಡೆಯಲಿದೆ.
------------