ಪೊಲೀಸ್ ರಿಮಾಂಡ್ ಪ್ರಶ್ನಿಸಿ ನ್ಯೂಸ್ಕ್ಲಿಕ್ ಸಂಪಾದಕ, ಎಚ್ಆರ್ ಮುಖ್ಯಸ್ಥ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ದಿಲ್ಲಿ ಹೈಕೋರ್ಟ್
ಪ್ರಬೀರ್ ಪುರ್ಕಾಯಸ್ಥ (Photo: thewire.in)
ಹೊಸದಿಲ್ಲಿ: ಅಕ್ರಮ ಚಟುವಟಿಕೆಗೆಳ ನಿಯಂತ್ರಣ ಕಾಯಿದೆಯಡಿಯ ಪ್ರಕರಣದಲ್ಲಿ ನ್ಯೂಸ್ಕ್ಲಿಕ್ ಸ್ಥಾಪಕ ಮತ್ತು ಮುಖ್ಯ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಮತ್ತು ಸಂಸ್ಥೆಯ ಮಾನವ ಸಂಪನ್ಮೂಲಗಳ ವಿಭಾಗದ ಮುಖ್ಯಸ್ಥ ಅಮಿತ್ ಚಕ್ರವರ್ತಿ ತಮ್ಮ ಪೊಲೀಸ್ ರಿಮಾಂಡ್ ಅನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ದಿಲ್ಲಿ ಹೈಕೋರ್ಟ್ ಇಂದು ವಜಾಗೊಳಿಸಿದೆ.
ಪುರ್ಕಾಯಸ್ಥ ಮತ್ತು ಚಕ್ರವರ್ತಿ ಅವರನ್ನು ಅಕ್ಟೋಬರ್ 3ರಂದು ದಿಲ್ಲಿ ಪೊಲೀಸರು ನ್ಯೂಸ್ಕ್ಲಿಕ್ ಕಚೇರಿ ಮತ್ತು ಸಂಪಾದಕರ ಹಾಗೂ ಸಂಸ್ಥೆಗೆ ಸಂಬಂಧಿಸಿದವರ ನಿವಾಸಗಳ ಮೇಲೆ ದಾಳಿ ನಡೆಸಿದ ನಂತರ ಬಂಧಿಸಿದ್ದರು. ಚೀನಾ ಪರ ಪ್ರಚಾರಕ್ಕಾಗಿ ನ್ಯೂಸ್ಕ್ಲಿಕ್ ಹಣ ಪಡೆದಿದೆ ಎಂಬ ಆರೋಪ ಹೊರಿಸಲಾಗಿತ್ತು.
ಮರುದಿನ ಅವರನ್ನು ಏಳು ದಿನಗಳ ಪೊಲೀಸ್ ಕಸ್ಟಡಿಗೆ ವಹಿಸಲಾಗಿತ್ತು. ಆದರೆ ಪುರ್ಯಕಸ್ಥ ಅವರ ವಕೀಲರು ದಿಲ್ಲಿ ಹೈಕೋರ್ಟ್ ಮುಂದೆ ವಾದ ಮಂಡಿಸಿ ರಿಮಾಂಡ್ ಆದೇಶವು ದಿಲ್ಲಿ ಹೈಕೋರ್ಟ್ ನಿಯಮಗಳನ್ನು ಉಲ್ಲಂಘಿಸುತ್ತದೆ ಹಾಗೂ ಆರೋಪಿಗಳ ಪರ ವಕೀಲರ ವಾದವನ್ನು ಆಲಿಸದೇ ವಿಚಾರಣಾ ನ್ಯಾಯಾಲಯ ರಿಮಾಂಡ್ ಆದೇಶ ಹೊರಡಿಸಿತ್ತು ಎಂದಿದ್ದರು.
ಆದರೂ ಆ ಸಂದರ್ಭ ಹೈಕೋರ್ಟ್ ಆರೋಪಿಗಳಿಗೆ ಮಧ್ಯಂತರ ಜಾಮೀನಿಗೆ ನಿರಾಕರಿಸಿತ್ತು.
ಪೊಲೀಸ್ ರಿಮಾಂಡ್ ಅವಧಿ ಮುಗಿದ ನಂತರ ಇಬ್ಬರನ್ನೂ 10 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ತಮ್ಮ ವಿರುದ್ಧ ದಾಖಲಾದ ಎಫ್ಐಆರ್ ರದ್ದುಗೊಳಿಸಬೇಕೆಂದು ಇಬ್ಬರೂ ಸಲ್ಲಿಸಿರುವ ಅರ್ಜಿಯನ್ನು ಹೈಕೋರ್ಟ್ ಇನ್ನಷ್ಟೇ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕಿದೆ.