ಮಾನಹಾನಿ ಪ್ರಕರಣ: ಮೇಧಾ ಪಾಟ್ಕರ್ ಗೆ ವಿಧಿಸಲಾಗಿದ್ದ ಶಿಕ್ಷೆ ಅಮಾನತುಗೊಳಿಸಿದ ದಿಲ್ಲಿ ಹೈಕೋರ್ಟ್

ಮೇಧಾ ಪಾಟ್ಕರ್ , ವಿ.ಕೆ.ಸಕ್ಸೇನಾ | PTI
ಹೊಸದಿಲ್ಲಿ: ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ತಮ್ಮ ವಿರುದ್ಧ ದಾಖಲಿಸಿದ್ದ ಮಾನಹಾನಿ ಪ್ರಕರಣದಲ್ಲಿ ಬಂಧಿತರಾಗಿದ್ದ ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ದಿಲ್ಲಿ ಹೈಕೋರ್ಟ್ ಅಮಾನತುಗೊಳಿಸಿದೆ.
ಗುಜರಾತ್ ನಲ್ಲಿ ಸರಕಾರೇತರ ಸಂಸ್ಥೆಯೊಂದನ್ನು ನಡೆಸುವಾಗ, 23 ವರ್ಷಗಳ ಹಿಂದೆ ವಿ.ಕೆ.ಸಕ್ಸೇನಾ ಈ ಪ್ರಕರಣವನ್ನು ದಾಖಲಿಸಿದ್ದರು.
ಇದಕ್ಕೂ ಮುನ್ನ, ಮಾನಹಾನಿ ಪ್ರಕರಣದಲ್ಲಿ ಎಪ್ರಿಲ್ 2ರಂದು ಮೇಧಾ ಪಾಟ್ಕರ್ ವಿರುದ್ಧದ ದೋಷಾರೋಪಗಳನ್ನು ಎತ್ತಿ ಹಿಡಿದಿದ್ದ ಸೆಷನ್ಸ್ ನ್ಯಾಯಾಲಯವೊಂದು, ಅವರ ಒಳ್ಳೆಯ ನಡತೆಯ ಹಿನ್ನೆಲೆಯಲ್ಲಿ, ಅವರಿಗೆ ವಿಧಿಸಲಾಗಿದ್ದ ಜೈಲು ಶಿಕ್ಷೆಯನ್ನು ಅಮಾನತುಗೊಳಿಸಿತ್ತು. ಎಪ್ರಿಲ್ 8ರಂದು 25,000 ರೂ. ಮೌಲ್ಯದ ತಾತ್ಕಾಲಿಕ ಬಾಂಡ್ ಒದಗಿಸಬೇಕು ಎಂದು ಸೂಚಿಸಿದ್ದ ನ್ಯಾಯಾಲಯ, ಅವರಿಗೆ ಒಂದು ಲಕ್ಷ ರೂ. ಪೂರ್ವ ಶರತ್ತಿನ ದಂಡವನ್ನೂ ವಿಧಿಸಿತ್ತು.
ತಾತ್ಕಾಲಿಕ ಬಾಂಡ್ ಸಲ್ಲಿಕೆಯು ಅಪರಾಧಿಗಳಿಗೆ ನೀಡಲಾಗುವ ಸಾಂಸ್ಥಿಕೇತರ ಉಪಚಾರವಾಗಿದ್ದು, ಅಪರಾಧಿಯೆಂದು ಘೋಷಣೆಯಾದ ನಂತರ, ಅಪರಾಧಿಯ ಸನ್ನಡತೆಯನ್ನು ಆಧರಿಸಿ, ಆತನನ್ನು ಜೈಲಿಗೆ ಕಳಿಸುವ ಬದಲು, ಬಾಂಡ್ ಮೇಲೆ ಬಿಡುಗಡೆ ಮಾಡುವುದನ್ನು ತಾತ್ಕಾಲಿಕ ಬಾಂಡ್ ವಿಧಾನ ಎಂದು ಕರೆಯಲಾಗುತ್ತದೆ.
ಆದರೆ, ನಿಗದಿಪಡಿಸಲಾದ ದಿನಾಂಕದಂದು ತಾತ್ಕಾಲಿಕ ಬಾಂಡ್ ನ ಶರತ್ತುಗಳನ್ನು ಪಾಲಿಸಲು ಮೇಧಾ ಪಾಟ್ಕರ್ ವಿಫಲಗೊಂಡಿದ್ದರಿಂದ, ಅವರ ವಿರುದ್ಧ ನ್ಯಾಯಾಲಯವು ಜಾಮೀನು ರಹಿತ ವಾರಂಟ್ ಜಾರಿಗೊಳಿಸಿತ್ತು.
ಇದರ ಬೆನ್ನಿಗೇ, ಶುಕ್ರವಾರ ಬೆಳಗ್ಗೆ ಬಂಧಿತರಾಗಿದ್ದ ಮೇಧಾ ಪಾಟ್ಕರ್ ರನ್ನು ಸೆಷನ್ಸ್ ನ್ಯಾಯಾಲಯವೊಂದರ ಮುಂದೆ ಹಾಜರುಪಡಿಸಲಾಗಿತ್ತು. ನಂತರ, ಅವರಿಂದ ಬಾಂಡ್ ಪಡೆದು ಬಿಡುಗಡೆ ಮಾಡಬೇಕು ಎಂದು ನ್ಯಾಯಾಧೀಶರು ಮೌಖಿಕವಾಗಿ ಆದೇಶಿಸಿದ್ದರು.
ಆದರೆ, ಈ ಆದೇಶವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾ. ಶೈಲೇಂದರ್ ಕೌರ್, ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಅಮಾನತುಗೊಳಿಸಿ, 25,000 ರೂ. ವೈಯಕ್ತಿಕ ಬಾಂಡ್ ಮೇಲೆ ಮೇಧಾ ಪಾಟ್ಕರ್ ಅವರಿಗೆ ಜಾಮೀನು ಮಂಜೂರು ಮಾಡಿದೆ.
ನಂತರ, ತಮಗೆ ವಿಧಿಸಿರುವ ಶಿಕ್ಷೆಯನ್ನು ಪ್ರಶ್ನಿಸಿ ಮೇಧಾ ಪಾಟ್ಕರ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮೇ 20ಕ್ಕೆ ನ್ಯಾಯಾಲಯ ಮುಂದೂಡಿದೆ.