ಸಮಸ್ಯೆಗಳನ್ನು ಹೊತ್ತು ಶಾಸಕರು ನ್ಯಾಯಾಲಯದ ಮೆಟ್ಟಿಲೇರುವುದು ಉತ್ತಮ ವ್ಯವಸ್ಥೆಯ ಪ್ರತಿಫಲನವಲ್ಲ : ದಿಲ್ಲಿ ಹೈಕೋರ್ಟ್ ಅಸಮಾಧಾನ
ದಿಲ್ಲಿ ಹೈಕೋರ್ಟ್ | PC : PTI
ಹೊಸದಿಲ್ಲಿ : ಸಾರ್ವಜನಿಕ ಪ್ರಾಧಿಕಾರಗಳೊಂದಿನ ಸಮಸ್ಯೆಯನ್ನು ಹೊತ್ತು ಶಾಸಕರೊಬ್ಬರು ನ್ಯಾಯಾಲಯದ ಮೆಟ್ಟಿಲೇರುವಂತಾಗುವುದು ಸರಕಾರದ ಬಗ್ಗೆ ಉತ್ತಮ ಅಭಿಪ್ರಾಯವನ್ನು ಪ್ರತಿಫಲಿಸುವುದಿಲ್ಲ ಎಂದು ಸೋಮವಾರ ದಿಲ್ಲಿ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿನ ನಾಥು ಕಾಲನಿ ಚೌಕ್ ಬಳಿಯಿರುವ ಮೇಲ್ಸೇತುವೆಯನ್ನು ದುರಸ್ತಿ ಮಾಡಿ, ಪುನಾರಂಭಗೊಳಿಸುವಂತೆ ದಿಲ್ಲಿ ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಶಾಸಕ ಜಿತೇಂದ್ರ ಮಹಾಜನ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಹಾಗೂ ನ್ಯಾ. ತುಷಾರ್ ರಾವ್ ಗೆಡೆಲಾ ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯಪೀಠವು ಮೇಲಿನಂತೆ ಅಸಮಾಧಾನ ವ್ಯಕ್ತಪಡಿಸಿತು.
“ಒಂದು ವೇಳೆ ಶಾಸಕರು ನ್ಯಾಯಾಲಯಕ್ಕೆ ಬರಲು ಪ್ರಾರಂಭಿಸಿದರೆ ಏನಾಗಲಿದೆ? ಅವರು ಸಮಸ್ಯೆಯನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಬೇಕು. ಸಮಸ್ಯೆಯನ್ನು ಹೇಗೆ ಪ್ರಸ್ತಾಪಿಸಬೇಕು ಎಂದು ಅವರಿಗೆ ತಿಳಿದಿರಬೇಕು. ಅವರು ಎಲ್ಲ ಕೆಲಸವನ್ನೂ ಮಾಡಿಸಿಕೊಳ್ಳಬೇಕು” ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿತು.
ಅರ್ಜಿಯ ಕುರಿತು ನಿರ್ದೇಶನಗಳನ್ನು ಪಡೆಯಲು ಪ್ರಾಧಿಕಾರಗಳ ವಕೀಲರಿಗೆ ನ್ಯಾಯಾಲಯ ಸಮಯಾವಕಾಶ ನೀಡಿತಾದರೂ, ಈ ಸಮಸ್ಯೆಯನ್ನು ಶಾಸಕರು ವಿಧಾನಸಭೆಯಲ್ಲಿ ಪ್ರಸ್ತಾಪಿಸಬೇಕು ಇಲ್ಲವೆ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕು ಎಂದೂ ಸೂಚಿಸಿತು.
ಅರ್ಜಿಯ ಮುಂದಿನ ವಿಚಾರಣೆ ನವೆಂಬರ್ ನಲ್ಲಿ ನಡೆಲಿದೆ.