ಜಗ್ಗಿ, ಇಶಾ ಪ್ರತಿಷ್ಠಾನದ ವೀಡಿಯೊ ತೆಗೆದು ಹಾಕುವಂತೆ ದಿಲ್ಲಿ ಹೈಕೋರ್ಟ್ ನಿರ್ದೇಶ

ಶ್ಯಾಮ್ ಮೀರಾ ಸಿಂಗ್(FACEBOOK \Shyam Meera Singh) , ಜಗ್ಗಿ ವಾಸುದೇವ ರಾವ್ (PTI)
ಹೊಸದಿಲ್ಲಿ: ಯುಟ್ಯೂಬರ್ ಶ್ಯಾಮ್ ಮೀರಾ ಸಿಂಗ್ ಅಪ್ ಲೋಡ್ ಮಾಡಿದ ಇಶಾ ಪ್ರತಿಷ್ಠಾನ ಹಾಗೂ ಅದರ ಸ್ಥಾಪಕ ಜಗ್ಗಿ ವಾಸುದೇವ ರಾವ್ ಕುರಿತ ಮಾನಹಾನಿಕರ ಎಂದು ಹೇಳಲಾದ ವೀಡಿಯೊವನ್ನು ತೆಗೆದು ಹಾಕುವಂತೆ ಗೂಗಲ್, ಸಾಮಾಜಿಕ ಮಾಧ್ಯಮದ ವೇದಿಕೆ ‘ಎಕ್ಸ್’ ಹಾಗೂ ಮೆಟಾಕ್ಕೆ ದಿಲ್ಲಿ ಉಚ್ಚ ನ್ಯಾಯಾಲಯ ಬುಧವಾರ ಸೂಚಿಸಿದೆ.
‘‘ಸದ್ಗುರು ಎಕ್ಸ್ಪೋಸ್ಡ್: ವಾಟ್ ಹ್ಯಾಪನ್ಡ್ ಇನ್ ಜಗ್ಗಿ ವಾಸುದೇವ್ಸ್ ಆಶ್ರಮ್’’ ಶೀರ್ಷಿಕೆಯ ವೀಡಿಯೊವನ್ನು ಫೆಬ್ರವರಿ 24ರಂದು ಸಿಂಗ್ ಅವರ ಯುಟ್ಯೂಬ್ ಚಾನೆಲ್ಗೆ ಅಪ್ಲೋಡ್ ಮಾಡಲಾಗಿತ್ತು. ವಾಸುದೇವ್ ಅವರ ಆಶ್ರಮದಲ್ಲಿ ಅಪ್ರಾಪ್ತರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಈ ವೀಡಿಯೊದಲ್ಲಿ ಆರೋಪಿಸಲಾಗಿತ್ತು. ಸಿಂಗ್ ಈ ವೀಡಿಯೊವನ್ನು ‘ಎಕ್ಸ್’ನಲ್ಲಿ ಕೂಡ ಶೇರ್ ಮಾಡಿಕೊಂಡಿದ್ದರು.
ಸಿಂಗ್ ಅವರ ವಿರುದ್ಧ ಇಶಾ ಪ್ರತಿಷ್ಠಾನ ದಾಖಲಿಸಿದ ಮಾನನಷ್ಟ ಪ್ರಕರಣದ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುಬ್ರಹ್ಮಣೀಯನ್ ಪ್ರಸಾದ್ ವೀಡಿಯೊ ತೆಗೆದು ಹಾಕುವಂತೆ ನಿರ್ದೇಶಿಸಿದರು. ವೀಡಿಯೊವನ್ನು ತೆಗೆದು ಹಾಕುವಂತೆ ಇಶಾ ಪ್ರತಿಷ್ಠಾನ ಕೋರಿತ್ತು.
ವೀಡಿಯೊವನ್ನು ಪ್ರಕಟಿಸುವುದು ಹಾಗೂ ಹಂಚಿಕೊಳ್ಳುವುದನ್ನು ತಡೆ ಹಿಡಿಯುವಂತೆ, ಅಲ್ಲದೆ, ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡದಂತೆ ನ್ಯಾಯಾಲಯ ಸಿಂಗ್ಗೆ ಸೂಚಿಸಿದೆ.
ಈ ಮಾನ ಹಾನಿ ಮೊಕದ್ದಮೆಯನ್ನು ಜುಲೈ 9ರಂದು ಹಾಗೂ ಮಧ್ಯಂತರ ಪರಿಹಾರ ಅರ್ಜಿಯನ್ನು ಮೇ 9ರಂದು ವಿಚಾರಣೆ ನಡೆಸಲು ನ್ಯಾಯಾಲಯ ಪಟ್ಟಿ ಮಾಡಿತ್ತು.
ಮೊಕದ್ದಮೆಯಲ್ಲಿ ಇಶಾ ಪ್ರತಿಷ್ಠಾನ, ಸಿಂಗ್ ಅಪ್ಲೋಡ್ ಮಾಡಿದ ವೀಡಿಯೊದಲ್ಲಿರುವ ವಿಷಯ ದುರುದ್ದೇಶಪೂರಿತ ಹಾಗೂ ಸ್ಪಷ್ಟವಾಗಿ ಸುಳ್ಳಿನ ಲಕ್ಷಣವನ್ನು ಹೊಂದಿದೆ ಎಂದು ಪ್ರತಿಪಾದಿಸಿತ್ತು ಎಂದು ಹೇಳಲಾಗಿದೆ.