ಸಿಸೋಡಿಯಾ ಜಾಮೀನು ನಿರಾಕರಿಸಿದ ದಿಲ್ಲಿ ಹೈಕೋರ್ಟ್

ಮನೀಶ್ ಸಿಸೋಡಿಯಾ | PC : PTI
ಹೊಸದಿಲ್ಲಿ : ದಿಲ್ಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ದಾಖಲಿಸಿರುವ ಭ್ರಷ್ಟಾಚಾರ ಹಾಗೂ ಕಪ್ಪುಹಣ ಬಿಳುಪು ಪ್ರಕರಣಗಳಲ್ಲಿ ಜಾಮೀನು ಬಿಡುಗಡೆ ಕೋರಿ ದಿಲ್ಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಸಲ್ಲಿಸಿದ್ದ ಅರ್ಜಿಯನ್ನು ದಿಲ್ಲಿ ಹೈಕೋರ್ಟ್ ಮಂಗಳವಾರ ತಿರಸ್ಕರಿಸಿದೆ.
ಇಲೆಕ್ಟ್ರಾನಿಕ್ ಪುರಾವೆಗಳು ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದ ನಿರ್ಣಾಯಕ ಸಾಕ್ಷ್ಯಗಳನ್ನು ನಾಶಪಡಿಸಿದ ಕೃತ್ಯದಲ್ಲಿ ಭಾಗಿಯಾದ ಆರೋಪವನ್ನು ಸಿಸೋಡಿಯಾ ಎದುರಿಸುತ್ತಿದ್ದಾರೆ. ‘‘ ದಿಲ್ಲಿ ಸರಕಾರದ ಅಧಿಕಾರದ ಕಾರಿಡಾರ್ಗಳಲ್ಲಿ ಸಿಸೋಡಿಯಾ ಅತ್ಯಂತ ಪ್ರಬಲ ಹಾಗೂ ಪ್ರಭಾವಶಾಲಿ ವ್ಯಕ್ತಿ. ತನ್ನ ಪೂರ್ವಯೋಜಿತ ಗುರಿಗೆ ಹೊಂದಿಕೆಯಾಗುವಂತೆ ಅವರು ಅಬಕಾರಿ ನೀತಿಯ ಪ್ರಕ್ರಿಯೆನ್ನು ತಿರುಚಿದ್ದಾರೆ’’ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.
ತನಗೆ ಜಾಮೀನು ನೀಡಲು ನಿರಾಕರಿಸಿದ ವಿಚಾರಣಾ ನ್ಯಾಯಾಲಯದ ಎಪ್ರಿಲ್ 30ರ ಆದೇಶವನ್ನು ಪ್ರಶ್ನಿಸಿ ಸಿಸೋಡಿಯಾ ಅವರು ದಿಲ್ಲಿ ಹೈಕೋರ್ಟ್ ಮೆಟ್ಟಲೇರಿದ್ದರು. ಇದೇ ವೇಳೆ ಅನಾರೋಗ್ಯಪೀಡಿತರಾಗಿರುವ ಪತ್ನಿಯನ್ನು ವಾರದಲ್ಲಿ ಒಂದು ಸಲ ಪೊಲೀಸ್ ಕಸ್ಟಡಿಯಲ್ಲಿ ಭೇಟಿಯಾಗಲು ಸಿಸೋಡಿಯಾ ಅವರಿಗೆ ನೀಡಲಾದ ಮಧ್ಯಂತರ ಅನುಮತಿಯನ್ನು ಮುಂದುವರಿಸುವಂತೆ ಹೈಕೋರ್ಟ್ ಸೂಚಿಸಿದೆ.
ದಿಲ್ಲಿಯ ಉಪಮುಖ್ಯಮಂತ್ರಿ ಆಗಿದ್ದ ಮನೀಶ್ ಸಿಸೋಡಿಯಾ ಅವರನ್ನು ಅಬಕಾರಿ ನೀತಿ ಹಗರಣದ ಕಪ್ಪುಹಣ ಬಿಳುಪು ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ 2023ರ ಮಾರ್ಚ್ 9ರಂದು ಬಂಧಿಸಿತ್ತು.