ಸೈಬರ್ ದಾಳಿಗೆ ಒಳಗಾದ ಬ್ಯಾಂಕ್ ಗ್ರಾಹಕನಿಗೆ ಪರಿಹಾರ ನೀಡುವಂತೆ SBIಗೆ ನಿರ್ದೇಶಿಸಿದ ದಿಲ್ಲಿ ಹೈಕೋರ್ಟ್
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಸೈಬರ್ ದಾಳಿಗೆ ಒಳಗಾದ ಬ್ಯಾಂಕ್ ಗ್ರಾಹಕನಿಗೆ ಪರಿಹಾರ ನೀಡುವಂತೆ ದಿಲ್ಲಿ ಹೈಕೋರ್ಟ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)ಗೆ ನಿರ್ದೇಶನ ನೀಡಿದೆ.
ಸೈಬರ್ ದಾಳಿಗೆ ಒಳಗಾದ ತಕ್ಷಣವೇ ನಾನು ಎಸ್ ಬಿಐ ಸಹಾಯವಾಣಿ ಮತ್ತು ಅದರ ಶಾಖೆಯ ವ್ಯವಸ್ಥಾಪಕರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದೇನೆ, ಆದರೆ ಬ್ಯಾಂಕ್ ಕಡೆಯಿಂದ ಯಾವುದೇ ನೆರವು ಸಿಗಲಿಲ್ಲ ಎಂದು ಗ್ರಾಹಕ ಹರೇ ರಾಮ್ ಸಿಂಗ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಸಿಂಗ್ ಅವರ ದೂರಿಗೆ ಎಸ್ ಬಿಐ ಸರಿಯಾಗಿ ಪ್ರತಿಕ್ರಿಯಿಸಿಲ್ಲ, ಸಿಂಗ್ ತನ್ನ ಖಾತೆ ಮೇಲೆ ಸೈಬರ್ ದಾಳಿ ಬಗ್ಗೆ ಎಸ್ ಬಿಐಗೆ ತಕ್ಷಣವೇ ಮಾಹಿತಿ ನೀಡಿದ್ದರೂ, ದೂರಿಗೆ ಬ್ಯಾಂಕ್ ಯಾವುದೇ ತುರ್ತು ಪ್ರತಿಕ್ರಿಯೆ ನೀಡಿಲ್ಲ ಮತ್ತು ಅನುಮಾನಾಸ್ಪದ ವಹಿವಾಟುಗಳನ್ನು ತಡೆಯಲು ಮುಂದಾಗಿಲ್ಲ. ಭದ್ರತಾ ಅಪಾಯಗಳಿಗೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್ ನ ನಿರ್ದೇಶನವನ್ನು ಅನುಸರಿಸಲು ಎಸ್ ಬಿಐ ವಿಫಲವಾಗಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಧರ್ಮೇಶ್ ಶರ್ಮಾ ವಿಚಾರಣೆ ವೇಳೆ ಗಮನಿಸಿದ್ದಾರೆ.
ಎಸ್ ಬಿಐ ಗ್ರಾಹಕ ಹರೇ ರಾಮ್ ಸಿಂಗ್ ಕಳೆದುಕೊಂಡ 2.6 ಲಕ್ಷ ರೂ.ವನ್ನು ಶೇ 9ರ ಬಡ್ಡಿಯೊಂದಿಗೆ ಅವರಿಗೆ ಪಾವತಿಸಲು ನ್ಯಾಯಾಲಯವು ಎಸ್ಬಿಐಗೆ ಆದೇಶಿಸಿದೆ. ಇದಲ್ಲದೆ ವೆಚ್ಚವಾಗಿ ಹೆಚ್ಚುವರಿಯಾಗಿ 25,000 ರೂ. ಪಾವತಿಸುವಂತೆಯೂ ಆದೇಶಿಸಿದೆ.
ಆನ್ ಲೈನ್ ಬ್ಯಾಂಕಿಂಗ್ ಮೂಲಕ ಹಣ ವರ್ಗಾವಣೆಯಾಗಿದೆ ಮತ್ತು ಈ ವಹಿವಾಟುಗಳಿಗೆ OTPಗಳು ಅಗತ್ಯವಿದೆ. ಸೈಬರ್ ದಾಳಿಗೆ ಕಾರಣವಾದ ಲಿಂಕ್ ಅನ್ನು ಸಿಂಗ್ ಸ್ವತಃ ಕ್ಲಿಕ್ ಮಾಡಿದ್ದಾರೆ ಎಂದು ಎಸ್ ಬಿಐ ಈ ಮೊದಲು ವಾದಿಸಿತ್ತು.