ಆದಾಯ ತೆರಿಗೆ ಮರುಮೌಲ್ಯಮಾಪನ ಪ್ರಕ್ರಿಯೆ ವಿರುದ್ಧ ಕಾಂಗ್ರೆಸ್ ಅರ್ಜಿ ವಜಾಗೊಳಿಸಿದ ದಿಲ್ಲಿ ಹೈಕೋರ್ಟ್
ದಿಲ್ಲಿ ಹೈಕೋರ್ಟ್ | PTI
ಹೊಸದಿಲ್ಲಿ : ಆದಾಯ ತೆರಿಗೆ ಇಲಾಖೆಯು 2014-15,2015-16 ಮತ್ತು 2016-17ರ ವಿತ್ತವರ್ಷಗಳಿಗಾಗಿ ತನ್ನ ವಿರುದ್ಧ ಆರಂಭಿಸಿರುವ ಆದಾಯ ತೆರಿಗೆ ಮರುಮೌಲ್ಯಮಾಪನ ಪ್ರಕ್ರಿಯೆಗಳನ್ನು ಪ್ರಶ್ನಿಸಿ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಗಳನ್ನು ದಿಲ್ಲಿ ಉಚ್ಛ ನ್ಯಾಯಾಲಯವು ಶುಕ್ರವಾರ ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ಯಶವಂತ ವರ್ಮಾ ಮತ್ತು ಪುರುಷೇಂದ್ರ ಕುಮಾರ ಅವರ ವಿಭಾಗೀಯ ಪೀಠವು, ಆದಾಯ ತೆರಿಗೆ ಕಾಯ್ದೆಯಡಿ ಇನ್ನಷ್ಟು ಪರಿಶೀಲನೆ ಮತ್ತು ತಪಾಸಣೆಯನ್ನು ಅಗತ್ಯವಾಗಿಸಿರುವ ಗಣನೀಯ ಮತ್ತು ದೃಢವಾದ ಪುರಾವೆಗಳನ್ನು ಆದಾಯ ತೆರಿಗೆ ಇಲಾಖೆಯು ಸಂಗ್ರಹಿಸಿರುವಂತೆ ಕಾಣುತ್ತಿದೆ ಎಂದು ಹೇಳಿತು.
ಕಾಂಗ್ರೆಸ್ ಪ್ರಕ್ರಿಯೆಗಳು ಅಂತ್ಯಗೊಳ್ಳುವ ಸಮಯದಲ್ಲಿ ತನ್ನನ್ನು ಸಂಪರ್ಕಿಸಿದೆ ಎಂದು ಪೀಠವು ಬೆಟ್ಟು ಮಾಡಿತು. ನಿಗದಿಯಂತೆ ಆದಾಯ ತೆರಿಗೆ ಇಲಾಖೆಯ ಮರುಮೌಲ್ಯಮಾಪನವು ಮಾ.31ರೊಳಗೆ ಪೂರ್ಣಗೊಳ್ಳಬೇಕಿದೆ.
ಆದಾಯ ತೆರಿಗೆ ಇಲಾಖೆಯು ಲೋಕಸಭಾ ಚುನಾವಣೆಗಳಿಗೆ ಮುನ್ನ ತನ್ನೆಲ್ಲ ಬ್ಯಾಂಕ್ ಖಾತೆಗಳನ್ನು ಸ್ತಂಭನಗೊಳಿಸಿದೆ ಎಂದು ಕಾಂಗ್ರೆಸ್ ಗುರುವಾರ ತಿಳಿಸಿತ್ತು.
2015-16ನೇ ವಿತ್ತವರ್ಷಕ್ಕಾಗಿ ಕಾಂಗ್ರೆಸ್ನಿಂದ 100 ಕೋ.ರೂ.ತೆರಿಗೆ ಬಾಕಿ ವಸೂಲಿಗೆ ಆದಾಯ ತೆರಿಗೆ ಇಲಾಖೆಯ ನೋಟಿಸಿಗೆ ತಡೆಯಾಜ್ಞೆ ನೀಡಲು ನಿರಾಕರಿಸಿದ್ದ ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣದ ಮಾ.8ರ ಆದೇಶವನ್ನು ದಿಲ್ಲಿ ಉಚ್ಛ ನ್ಯಾಯಾಲಯವು ಮಾ.13ರಂದು ಎತ್ತಿ ಹಿಡಿದಿತ್ತು.
ಆದಾಯ ತೆರಿಗೆ ಇಲಾಖೆಯು 2014-15,2015-16 ಮತ್ತು 2016-17ರ ವಿತ್ತವರ್ಷಗಳಿಗಾಗಿ ತನ್ನ ವಿರುದ್ಧ ಆರಂಭಿಸಿರುವ ಆದಾಯ ತೆರಿಗೆ ಮರುಮೌಲ್ಯಮಾಪನ ಪ್ರಕ್ರಿಯೆಗಳನ್ನು ಪ್ರಶ್ನಿಸಿ ಕಾಂಗ್ರೆಸ್ ಮಾ.19ರಂದು ಮತ್ತೆ ದಿಲ್ಲಿ ಉಚ್ಛ ನ್ಯಾಯಾಲಯದ ಮೊರೆ ಹೋಗಿತ್ತು.