ʼಸಂವಿಧಾನ್ ಹತ್ಯಾ ದಿವಸ್ʼ ಆಚರಿಸುವ ಕೇಂದ್ರದ ಕ್ರಮವನ್ನು ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ದಿಲ್ಲಿ ಹೈಕೋರ್ಟ್

ದಿಲ್ಲಿ ಹೈಕೋರ್ಟ್
ಹೊಸದಿಲ್ಲಿ: 1975ರಲ್ಲಿ ಭಾರತ ಸರಕಾರವು ಹೇರಿದ್ದ ರಾಷ್ಟ್ರೀಯ ತುರ್ತು ಪರಿಸ್ಥಿತಿಯ ಸಂತ್ರಸ್ತರು ಹಾಗೂ ಅದರ ವಿರುದ್ಧ ಹೋರಾಡಿದ್ದವರಿಗೆ ಗೌರವ ನಮನ ಸಲ್ಲಿಸಲು ಜೂನ್ 25 ಅನ್ನು ʼಸಂವಿಧಾನ್ ಹತ್ಯಾ ದಿವಸ್ʼ ಆಚರಿಸಲು ಕೇಂದ್ರ ಸರಕಾರವು ಹೊರಡಿಸಿರುವ ಅಧಿಸೂಚನೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಶುಕ್ರವಾರ ದಿಲ್ಲಿ ಹೈಕೋರ್ಟ್ ವಜಾಗೊಳಿಸಿದೆ.
“ಕೇಂದ್ರ ಸರಕಾರವು ಜುಲೈ 13ರಂದು ಹೊರಡಿಸಿರುವ ಅಧಿಸೂಚನೆಯು ಸಂವಿಧಾನದ ವಿಧಿ 352ರ ಅಡಿ ತುರ್ತು ಪರಿಸ್ಥಿತಿ ಹೇರಲು ನೀಡಿರುವ ಅವಕಾಶದ ವಿರುದ್ಧವಲ್ಲ; ಬದಲಿಗೆ ಅಧಿಕಾರದ ದುರುಪಯೋಗ, ಸಂವಿಧಾನದ ಅವಕಾಶದ ದುರುಪಯೋಗ ಮತ್ತು ಅದರ ನಂತರ ನಡೆದ ದೌರ್ಜನ್ಯದ ವಿರುದ್ಧವಾಗಿದೆ” ಎಂದು ಅರ್ಜಿಯನ್ನು ವಜಾಗೊಳಿಸಿದ ನ್ಯಾ. ಮನಮೋಹನ್ ಹಾಗೂ ನ್ಯಾ. ತುಷಾರ್ ರಾವ್ ಗೆಡೆಲಾ ಅವರನ್ನೊಳಗೊಂಡಿದ್ದ ನ್ಯಾಯಪೀಠವು ಅಭಿಪ್ರಾಯ ಪಟ್ಟಿತು.
“ಅಧಿಸೂಚನೆಯು ಸಂವಿಧಾನವನ್ನು ಉಲ್ಲಂಘಿಸುವುದಿಲ್ಲ ಅಥವಾ ಅದಕ್ಕೆ ಅಗೌರವ ತೋರುವುದಿಲ್ಲ” ಎಂದು ಅರ್ಜಿಯನ್ನು ವಜಾಗೊಳಿಸುವುದಕ್ಕೂ ಮುನ್ನ ನ್ಯಾಯಾಲಯವು ಹೇಳಿತು.
ಕೇಂದ್ರ ಸರಕಾರದ ಜುಲೈ 13ರ ಅಧಿಸೂಚನೆಯನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ಸಮೀರ್ ಮಲಿಕ್ ಎಂಬವರು, ತುರ್ತು ಪರಿಸ್ಥಿತಿ ಹೇರಲು ಸಂವಿಧಾನದ ವಿಧಿ 352ರ ಅಡಿಯೇ ಅವಕಾಶ ನೀಡಲಾಗಿದ್ದು, ಹೀಗಾಗಿ ಅದನ್ನು ಸಂವಿಧಾನದ ಹತ್ಯೆ ಎಂದು ಹೇಳಲು ಬರುವುದಿಲ್ಲ” ಎಂದು ವಾದಿಸಿದ್ದರು.
ಕೇಂದ್ರ ಸರಕಾರದ ಅಧಿಸೂಚನೆಯು ತೀವ್ರ ಅವಹೇಳನಕಾರಿಯಾಗಿದೆ ಎಂದೂ ಅವರು ವಾದಿಸಿದ್ದರು. ಆದರೆ, ನ್ಯಾಯಾಲಯವು ಅವರ ಅರ್ಜಿಯನ್ನು ವಜಾಗೊಳಿಸಿತು. ಈ ಸಂದರ್ಭದಲ್ಲಿ ರಾಜಕಾರಣಿಗಳು ಯಾವಾಗಲೂ ಸಂವಿಧಾನದ ಹತ್ಯೆ ಎಂಬ ವಾಕ್ಯವನ್ನು ಬಳಸುತ್ತಿರುತ್ತಾರೆ ಎಂದು ನ್ಯಾಯಾಲಯ ಉದಾಹರಿಸಿತು.
ಇಂತಹುದೇ ಅರ್ಜಿಯೊಂದು ಅಲಹಾಬಾದ್ ಹೈಕೋರ್ಟ್ ಎದುರು ವಿಚಾರಣೆಗೆ ಬಾಕಿ ಇದೆ.