2,000 ನೋಟುಗಳನ್ನು ಹಿಂತೆಗೆದುಕೊಳ್ಳುವ ಆರ್ ಬಿಐ ನಿರ್ಧಾರ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ದಿಲ್ಲಿ ಹೈಕೋರ್ಟ್
ಫೋಟೋ PTI
ಹೊಸದಿಲ್ಲಿ: 2,000 ರೂಪಾಯಿ ಕರೆನ್ಸಿ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ದಿಲ್ಲಿ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ ಎಂದು Live Law ವರದಿ ಮಾಡಿದೆ.
2000 ಮುಖಬೆಲೆಯ ನೋಟುಗಳನ್ನು ಸಾಮಾನ್ಯವಾಗಿ ವಹಿವಾಟಿಗೆ ಬಳಸಲಾಗುತ್ತಿಲ್ಲ ಎಂದು ರಿಸರ್ವ್ ಬ್ಯಾಂಕ್ ಮೇ 19ರಂದು ನೋಟುಗಳನ್ನು ಹಿಂಪಡೆಯುವ ನಿರ್ಧಾರವನ್ನು ಪ್ರಕಟಿಸಿತ್ತು. 2,000 ಮುಖಬೆಲೆಯ ನೋಟು ಕಾನೂನುಬದ್ಧವಾಗಿ ಉಳಿಯುತ್ತದೆ. ಆದರೆ ಜನರು ಸೆಪ್ಟೆಂಬರ್ 30 ರೊಳಗೆ ಅವುಗಳನ್ನು ತಮ್ಮ ಖಾತೆಗಳಲ್ಲಿ ವಿನಿಮಯ ಮಾಡಿಕೊಳ್ಳಲು ಅಥವಾ ಠೇವಣಿ ಇಡುವಂತೆ ಸೂಚಿಸಿತ್ತು.
ನೋಟುಗಳನ್ನು ಹಿಂಪಡೆಯಲು ಸ್ವತಂತ್ರವಾಗಿ ಆದೇಶಿಸಲು ರಿಸರ್ವ್ ಬ್ಯಾಂಕ್ಗೆ ಯಾವುದೇ ಅಧಿಕಾರವಿಲ್ಲ ಹಾಗೂ ಕೇಂದ್ರ ಮಾತ್ರ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ತಮ್ಮ ಅರ್ಜಿಯಲ್ಲಿ ವಕೀಲ ರಜನೀಶ್ ಭಾಸ್ಕರ್ ಗುಪ್ತಾ ಅವರು ವಾದಿಸಿದ್ದರು ಎಂದು Live Law ವರದಿ ಮಾಡಿದೆ.
ನಿರ್ದಿಷ್ಟ ಗಡುವಿನೊಳಗೆ ಚಲಾವಣೆಯಾದ ನಾಲ್ಕರಿಂದ ಐದು ವರ್ಷಗಳ ನಂತರ ಮಾತ್ರ ನೋಟು ಹಿಂಪಡೆಯುವುದು "ಅನ್ಯಾಯ, ಅನಿಯಂತ್ರಿತ ಮತ್ತು ಸಾರ್ವಜನಿಕ ನೀತಿಗೆ ವಿರುದ್ಧ" ಎಂದು ಗುಪ್ತಾ ವಾದಿಸಿದ್ದರು.
ಈ ನಿರ್ಧಾರವು ಬ್ಯಾಂಕ್ ಗಳಿಗೆ ಅಥವಾ ದೇಶದ ಆರ್ಥಿಕತೆಗೆ ಯಾವ ಪ್ರಯೋಜನವನ್ನು ನೀಡುತ್ತದೆ ಎಂದು ಕೇಂದ್ರ ಬ್ಯಾಂಕ್ ಹೇಳಿಲ್ಲ. ನೋಟುಗಳನ್ನು ಮುದ್ರಿಸಲು ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಮತ್ತು ನೋಟುಗಳ ಹಿಂಪಡೆಯುವಿಕೆಯಿಂದ ಅದು "ವ್ಯರ್ಥವಾಗುತ್ತದೆ" ಎಂದು ಮನವಿಯಲ್ಲಿ ತಿಳಿಸಲಾಗಿದೆ ಎಂದು Live Law ವರದಿ ಮಾಡಿದೆ.
ತೀರ್ಪಿನ ವಿವರವಾದ ಆದೇಶಕ್ಕಾಗಿ ಕಾಯಲಾಗುತ್ತಿದೆ