ರಜತ್ ಶರ್ಮ ವಿರುದ್ಧ ಪೋಸ್ಟ್ | ತೆಗೆದು ಹಾಕುವಂತೆ ಕಾಂಗ್ರೆಸ್ ನಾಯಕರಿಗೆ ದಿಲ್ಲಿ ಹೈಕೋರ್ಟ್ ಆದೇಶ
ರಜತ್ ಶರ್ಮ | Photo: X/ @RajatSharmaLive
ಹೊಸದಿಲ್ಲಿ: ಜೂನ್ 4, 2024ರಂದು ನಡೆದಿದ್ದ ಟಿವಿ ಚರ್ಚೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮಹಿಳಾ ವಕ್ತಾರೆಯ ವಿರುದ್ಧ ಟಿವಿ ನಿರೂಪಕ ರಜತ್ ಶರ್ಮ ನಿಂದನಾತ್ಮಕ ಭಾಷೆ ಬಳಸಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಜೈರಾಮ್ ರಮೇಶ್, ಪವನ್ ಖೇರಾ ಹಾಗೂ ರಾಗಿಣಿ ನಾಯಕ್ ಅವರಿಗೆ ತಮ್ಮ ಪೋಸ್ಟ್ ಗಳನ್ನು ತೆಗೆದು ಹಾಕುವಂತೆ ದಿಲ್ಲಿ ಹೈಕೋರ್ಟ್ ಆದೇಶಿಸಿದೆ.
ಟಿವಿ ಚರ್ಚೆಯ ಸಂದರ್ಭದಲ್ಲಿ ಅರ್ಜಿದಾರರು ಕೇವಲ ಕೆಲವು ಸೆಕೆಂಡುಗಳ ಕಾಲ ಮಧ್ಯಪ್ರವೇಶಿಸಿದ್ದಾರೆ ಹಾಗೂ ರಾಗಿಣಿ ನಾಯಕ್ ವಿರುದ್ಧ ಯಾವುದೇ ನಿಂದನಾತ್ಮಕ ಭಾಷೆಯನ್ನು ಬಳಸಿದಿರುವುದು ಮೇಲ್ನೋಟಕ್ಕೆ ಕಂಡು ಬಂದಿಲ್ಲ ಎಂದು ಅಭಿಪ್ರಾಯಪಟ್ಟ ನ್ಯಾ. ನೀನಾ ಬನ್ಸಲ್ ಕೃಷ್ಣ, ಒಂದು ವೇಳೆ ಅರ್ಜಿದಾರರಿಗೆ ತಡೆಯಾಜ್ಞೆ ಮಂಜೂರು ಮಾಡದಿದ್ದರೆ, ಅವರಿಗೆ ಸರಿಪಡಿಸಲಾಗದ ಹಾನಿಯಾಗಲಿದೆ ಎಂದೂ ಹೇಳಿದರು.
“ಚರ್ಚೆಯಲ್ಲಿ ಯಾವುದೇ ನಿಂದನೆಗಳಿಲ್ಲದಿದ್ದರೂ, ನಂತರದ ವೀಡಿಯೊಗಳಲ್ಲಿ ಸೇರ್ಪಡೆ ಮಾಡಲಾಗಿದೆ. ಇದರಿಂದ ವಾಸ್ತವ ಸಂಗತಿಗಳನ್ನು ಸಂಪೂರ್ಣ ತಪ್ಪಾಗಿ ಮಂಡಿಸಿರುವುದು ಮೇಲ್ನೋಟಕ್ಕೇ ಕಂಡು ಬರುತ್ತದೆ. ಇದರೊಂದಿಗೆ ತಿರುಚಿದ ಸಮರ್ಥನೆಗಳನ್ನು ಸೇರ್ಪಡೆ ಮಾಡಲಾಗಿದ್ದು, ಇದು ಅರ್ಜಿದಾರರ ಖ್ಯಾತಿಗೆ ಹಾನಿಯೆಸಗುವ ಗುರಿಯನ್ನು ಹೊಂದಿದೆ” ಎಂದೂ ನ್ಯಾಯಪೀಠವು ಅಭಿಪ್ರಾಯ ಪಟ್ಟಿತು.
ಸಂಗತಿಗಳನ್ನು ಅತಿಯಾಗಿ ವೈಭವೀಕರಿಸುವುದು ಹಾಗೂ ವಾಸ್ತವಗಳನ್ನು ಮರೆಮಾಚುವುದು ನಿಚ್ಚಳವಾಗಿ ತಪ್ಪಾಗುತ್ತದೆ. ಇಂತಹ ಎಕ್ಸ್ ಪೋಸ್ಟ್ ಗಳು ಅರ್ಜಿದಾರರ ನಿಂದನೆಯಲ್ಲದೆ ಮತ್ತೇನಲ್ಲ ಎಂಬ ಸಂಗತಿಯನ್ನು ನ್ಯಾಯಾಲಯವು ಗಮನಕ್ಕೆ ತೆಗೆದುಕೊಂಡಿತು.
ತಮಗೆ ಮಾನಹಾನಿ ಎಸಗಿರುವ ಕಾಂಗ್ರೆಸ್ ನಾಯಕರಿಂದ ರೂ. 100 ಕೋಟಿ ಪರಿಹಾರ ಹಾಗೂ ಶಾಶ್ವತ ತಡೆಯಾಜ್ಞೆಯನ್ನು ಕೋರಿ ರಜತ್ ಶರ್ಮ ನ್ಯಾಯಾಲಯದೆದುರು ಅರ್ಜಿಯೊಂದನ್ನು ಸಲ್ಲಿಸಿದ್ದಾರೆ.