ಸನಾತನ ಧರ್ಮ ರಕ್ಷಣಾ ಮಂಡಳಿ ಸ್ಥಾಪನೆಗೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ತಿರಸ್ಕರಿಸಿದ ದಿಲ್ಲಿ ಹೈಕೋರ್ಟ್
ದಿಲ್ಲಿ ಹೈಕೋರ್ಟ್ | PC : PTI
ಹೊಸದಿಲ್ಲಿ: ಸನಾತನ ಧರ್ಮ ರಕ್ಷಣಾ ಮಂಡಳಿಯ ಸ್ಥಾಪನೆಗೆ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಲು ಬುಧವಾರ ದಿಲ್ಲಿ ಹೈಕೋರ್ಟ್ ನಿರಾಕರಿಸಿದೆ.
ಈ ವಿಷಯವು ನೀತಿ ನಿರೂಪಣೆಗೆ ಸಂಬಂಧಿಸಿದ್ದಾಗಿದ್ದು, ಇಂತಹ ಮಂಡಳಿಯನ್ನು ಸ್ಥಾಪಿಸುವಂತೆ ಪ್ರಾಧಿಕಾರಗಳಿಗೆ ಸೂಚನೆ ನೀಡಲು ಸಾಧ್ಯವಿಲ್ಲ. ಬದಲಿಗೆ ಈ ಕುರಿತು ಸರಕಾರವನ್ನು ಸಂಪರ್ಕಿಸಿ ಎಂದು ಅರ್ಜಿದಾರರಿಗೆ ಸೂಚಿಸಿದ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಅವರನ್ನೊಳಗೊಂಡಿದ್ದ ನ್ಯಾಯಪೀಠವು, ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಲು ನಿರಾಕರಿಸಿತು.
“ನೀವು ಸರಕಾರದ ಬಳಿ ಹೋಗಬೇಕು. ನಾವಿದನ್ನು ಮಾಡಲಾರೆವು. ಸಂಸದರು ಈ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸುತ್ತಾರೆ. ಈ ವಿಷಯದಲ್ಲಿ ನಾವೇನೂ ಮಾಡಲು ಸಾಧ್ಯವಿಲ್ಲ. ನಾವು ಟ್ರಸ್ಟ್ ಅನ್ನು ರಚಿಸಲು ಸಾಧ್ಯವಿಲ್ಲ” ಎಂದು ನ್ಯಾ. ತುಷಾರ್ ರಾವ್ ತಡೇಲಾ ಅವರನ್ನೂ ಒಳಗೊಂಡಿದ್ದ ನ್ಯಾಯಪೀಠವು ಅರ್ಜಿದಾರರಿಗೆ ಸೂಚಿಸಿತು.
ಸನಾತನ ಹಿಂದೂ ಸೇವಾ ಸಂಘದ ಪರ ವಾದ ಮಂಡಿಸಿದ ವಕೀಲರು, ಇತರ ಧರ್ಮದವರಿಂದ ದಾಳಿಗೊಳಗಾಗುತ್ತಿರುವ ಸನಾತನ ಧರ್ಮದ ಅನುಯಾಯಿಗಳು ರಕ್ಷಿಸಲು ಮಂಡಳಿ ಸ್ಥಾಪನೆಯ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಇತರ ಧರ್ಮಗಳಿಗೆ ಈಗಾಗಲೇ ಇಂತಹ ಮಂಡಳಿಗಳಿದ್ದು, ನನ್ನ ಮನವಿಯ ಬಗ್ಗೆ ಕೇಂದ್ರ ಸರಕಾರದಿಂದ ಇನ್ನಷ್ಟೆ ಪ್ರತಿಕ್ರಿಯೆ ಸ್ವೀಕರಿಸಬೇಕಿದೆ ಎಂದೂ ಅವರು ನ್ಯಾಯಾಲಯಕ್ಕೆ ತಿಳಿಸಿದರು.
“ಅರ್ಜಿದಾರರಿಗೆ ಸರಕಾರವನ್ನು ಸಂಪರ್ಕಿಸುವ ಸ್ವಾತಂತ್ರ್ಯ ನೀಡಿ, ನಾವು ಈ ಅರ್ಜಿಯನ್ನು ಮುಕ್ತಾಯಗೊಳಿಸುತ್ತಿದ್ದೇವೆ” ಎಂದು ನ್ಯಾಯಾಲಯ ಹೇಳಿತು.