ಮೌಲಾನಾ ಆಝಾದ್ ಫೌಂಡೇಶನ್ ಮುಚ್ಚುಗಡೆ ನಿರ್ಧಾರದ ಕುರಿತು ಕೇಂದ್ರದ ಪ್ರತಿಕ್ರಿಯೆ ಕೇಳಿದ ದಿಲ್ಲಿ ಹೈಕೋರ್ಟ್
ದಿಲ್ಲಿ ಹೈಕೋರ್ಟ್ | Photo: PTI
ಹೊಸದಿಲ್ಲಿ: ಮೌಲಾನ ಆಝಾದ್ ಎಜುಕೇಶನ್ ಫೌಂಡೇಶನ್ ಅನ್ನು ಮುಚ್ಚುವ ಕೇಂದ್ರ ವಕ್ಫ್ ಮಂಡಳಿಯ ಪ್ರಸ್ತಾವನೆಯನ್ನು ಅನುಮೋದಿಸಿದ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ನಿರ್ಧಾರವನ್ನು ಪ್ರಶ್ನಿಸಿ ನಾಗರಿಕರ ಒಂದು ಗುಂಪು ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಿರುವ ದಿಲ್ಲಿ ಹೈಕೋರ್ಟ್, ಕೇಂದ್ರ ಸರ್ಕಾರದ ಪ್ರತಿಕ್ರಿಯೆಯನ್ನು ಕೋರಿದೆ. ಮುಂದುವರಿದ ವಿಚಾರಣೆ ಇಂದು ನಡೆಯಲಿದೆ.
ಫೌಂಡೇಶನ್ ಅನ್ನು ಮುಚ್ಚುವ ನಿರ್ಧಾರ ಏಕಪಕ್ಷೀಯವಾಗಿದೆ ಹಾಗೂ ಅರ್ಹ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ವಿದ್ಯಾರ್ಥಿವೇತನದಿಂದ ವಂಚಿತರನ್ನಾಗಿಸಲಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಅಷ್ಟೇ ಅಲ್ಲದೆ ಫೌಂಡೇಶನ್ ಅನ್ನು ಮುಚ್ಚುವ ವಿಚಾರದಲ್ಲಿ ಒಂದು ಸಂಸ್ಥೆಯನ್ನು ವಿಸರ್ಜಿಸುವ ಪ್ರಕ್ರಿಯೆಯನ್ನು ಅನುಸರಿಸಲಾಗಿಲ್ಲ ಹಾಗೂ ಫೌಂಡೇಶನ್ ಬಳಿ ಉಳಿದಿರುವ ನಿಧಿ ಸಿಡಬ್ಲ್ಯುಸಿಗೆ ಹೋಗಬೇಕು ಎಂದು ಸಚಿವಾಲಯ ಹೇಳಿದೆಯಲ್ಲದೆ ಅಂತಹುದೇ ಸಂಸ್ಥೆಗೆ ಹೋಗಬೇಕೆಂದು ಹೇಳಿಲ್ಲ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.