ನೀವು ಭಾರತವನ್ನು ಇಷ್ಟಪಡದಿದ್ದರೆ ಇಲ್ಲಿ ಕೆಲಸ ಮಾಡಬೇಡಿ: ʼವಿಕಿಪೀಡಿಯಾʼಕ್ಕೆ ದಿಲ್ಲಿ ಹೈಕೋರ್ಟ್ ಎಚ್ಚರಿಕೆ
ವಿಕಿಪೀಡಿಯಾ (Wikipedia) , ದಿಲ್ಲಿ ಹೈಕೋರ್ಟ್(ANI)
ಹೊಸದಿಲ್ಲಿ: ಆನ್ಲೈನ್ ಎನ್ಸೈಕ್ಲೋಪೀಡಿಯಾ ವಿಕಿಪೀಡಿಯಾಕ್ಕೆ ಗುರುವಾರ ಕಠಿಣ ಎಚ್ಚರಿಕೆಯನ್ನು ನೀಡಿರುವ ದಿಲ್ಲಿ ಉಚ್ಚ ನ್ಯಾಯಾಲಯವು ಅದನ್ನು ಭಾರತದಲ್ಲಿ ನಿರ್ಬಂಧಿಸುವ ಬೆದರಿಕೆಯನ್ನೊಡ್ಡಿದೆ. ತನ್ನ ಹಿಂದಿನ ಆದೇಶವನ್ನು ಪಾಲಿಸದ್ದಕ್ಕಾಗಿ ಅದು ವಿಕಿಪೀಡಿಯಾಕ್ಕೆ ನ್ಯಾಯಾಂಗ ನಿಂದನೆ ನೋಟಿಸನ್ನೂ ಹೊರಡಿಸಿತು.
ಸುದ್ದಿಸಂಸ್ಥೆ ಎಎನ್ಐ ವಿಕಿಪೀಡಿಯಾ ವಿರುದ್ಧ ದಾಖಲಿಸಿರುವ ಮಾನಹಾನಿ ಮೊಕದ್ದಮೆಗೆ ಸಂಬಂಧಿಸಿದ ವಿಚಾರಣೆ ಸಂದರ್ಭದಲ್ಲಿ ನ್ಯಾ.ನವೀನ ಚಾವ್ಲಾ ಅವರು ಈ ಎಚ್ಚರಿಕೆಯನ್ನು ನೀಡಿದರು.
"ನೀವು ಭಾರತವನ್ನು ಇಷ್ಟಪಡದಿದ್ದರೆ ಇಲ್ಲಿ ಕೆಲಸ ಮಾಡಬೇಡಿ. ನಿಮ್ಮ ಜಾಲತಾಣವನ್ನು ನಿರ್ಬಂಧಿಸುವಂತೆ ನಾವು ಸರಕಾರಕ್ಕೆ ಸೂಚಿಸುತ್ತೇವೆ" ಎಂದು ನ್ಯಾ.ಚಾವ್ಲಾ ಘೋಷಿಸಿದರು. ಎಎನ್ಐದ ವಿಕಿಪೀಡಿಯಾ ಪುಟದಲ್ಲಿ ವಿವಾದಾತ್ಮಕ ಬದಲಾವಣೆಗಳನ್ನು ಮಾಡಿದ್ದ ಸಂಪಾದಕರ ಕುರಿತು ಮಾಹಿತಿಯನ್ನು ಬಹಿರಂಗಗೊಳಿಸುವಲ್ಲಿ ವಿಕಿಪೀಡಿಯಾ ವೈಫಲ್ಯ ನ್ಯಾಯಾಲಯವನ್ನು ಸಿಟ್ಟಿಗೆಬ್ಬಿಸಿತ್ತು.
ವಿವಾದಾತ್ಮಕ ಬದಲಾವಣೆಗಳಲ್ಲಿ ಎಎನ್ಐ ಅನ್ನು ಭಾರತ ಸರಕಾರದ ‘ಪ್ರಚಾರ ಸಾಧನ’ ಎಂದು ಉಲ್ಲೇಖಿಸಿದ್ದು ಪ್ರಕರಣದ ಮೂಲಕಾರಣವಾಗಿದೆ. ಈ ಬದಲಾವಣೆಗಳನ್ನು ಮಾಡಿದ್ದ ಮೂರು ಖಾತೆಗಳ ವಿವರಗಳನ್ನು ಬಹಿರಂಗಗೊಳಿಸುವಂತೆ ನ್ಯಾಯಾಲಯವು ಈ ಹಿಂದೆ ವಿಕಿಪೀಡಿಯಾಕ್ಕೆ ಸೂಚಿಸಿತ್ತು. ಈ ಮಾಹಿತಿಯನ್ನು ಒದಗಿಸಲಾಗಿಲ್ಲ ಎಂದು ಎಎನ್ಐ ನ್ಯಾಯಾಲಯಕ್ಕೆ ತಿಳಿಸಿದಾಗ ಕ್ರುದ್ಧಗೊಂಡ ಪೀಠವು ವಿಕಿಪೀಡಿಯಾ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮಕ್ಕೆ ಚಾಲನೆ ನೀಡಿತು.
ಭಾರತದಲ್ಲಿ ಭೌತಿಕ ಉಪಸ್ಥಿತಿಯ ಕೊರತೆಯು ವಿಳಂಬಕ್ಕೆ ಕಾರಣವಾಗಿದೆ ಎಂಬ ವಿಕಿಪೀಡಿಯಾದ ಸಮಜಾಯಿಷಿಯನ್ನು ತಿರಸ್ಕರಿಸಿದ ನ್ಯಾ.ಚಾವ್ಲಾ, ‘ಪ್ರತಿವಾದಿ ಭಾರತದಲ್ಲಿಯ ಸಂಸ್ಥೆಯಲ್ಲ ಎನ್ನುವ ಪ್ರಶ್ನೆಯೇ ಇಲ್ಲ. ನಾವು ನಿಮ್ಮ ಇಲ್ಲಿಯ ವಹಿವಾಟುಗಳನ್ನು ಬಂದ್ ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದರು.
ಎರಡು ಕೋಟಿ ರೂ.ಗಳ ಪರಿಹಾರವನ್ನು ಕೋರಿರುವ ಎಎನ್ಐ,ವಿವಾದಾತ್ಮಕ ಬದಲಾವಣೆಗಳನ್ನು ತೆಗೆದುಹಾಕುವಂತೆ ಮತ್ತು ಭವಿಷ್ಯದಲ್ಲಿ ಇಂತಹ ಕಂಟೆಂಟ್ಗಳನ್ನು ತಡೆಯುವಂತೆ ವಿಕಿಪೀಡಿಯಾಕ್ಕೆ ಆದೇಶಿಸಲು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದೆ.
ಅಕ್ಟೋಬರ್ನಲ್ಲಿ ಮುಂದಿನ ವಿಚಾರಣೆಯನ್ನು ನಿಗದಿಗೊಳಿಸಿದ ಉಚ್ಚ ನ್ಯಾಯಾಲಯವು ವಿಕಿಪೀಡಿಯಾ ಪ್ರತಿನಿಧಿಯ ಉಪಸ್ಥಿತಿಗೆ ಆದೇಶಿಸಿದೆ.