ದಿಲ್ಲಿ ಜಲ ಮಂಡಳಿ ಪ್ರಕರಣ | ಮೊದಲ ಆರೋಪ ಪಟ್ಟಿ ದಾಖಲಿಸಿದ ಈಡಿ
Photo: X \ @dir_ed
ಹೊಸದಿಲ್ಲಿ : ದಿಲ್ಲಿ ಜಲ ಮಂಡಳಿ (ಡಿಜೆಬಿ)ಯಲ್ಲಿ ನಡೆದ ಭ್ರಷ್ಟಾಚಾರದ ಆರೋಪಕ್ಕೆ ನಂಟು ಹೊಂದಿದ ಹಣ ಅಕ್ರಮ ವರ್ಗಾವಣೆ ತನಿಖೆಗೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ತನ್ನ ಮೊದಲ ಆರೋಪ ಪಟ್ಟಿ ಸಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ.
ಜಾರಿ ನಿರ್ದೇಶನಾಲಯ ದಿಲ್ಲಿಯಲ್ಲಿರುವ ವಿಶೇಷ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ನ್ಯಾಯಾಲಯದ ಮುಂದೆ ಮಾರ್ಚ್ 28ರಂದು ಪ್ರಾಸಿಕ್ಯೂಷನ್ ದೂರು ದಾಖಲಿಸಿದೆ ಎಂದು ಮೂಲಗಳು ತಿಳಿಸಿವೆ.
ಆರೋಪ ಪಟ್ಟಿಯಲ್ಲಿ ಡಿಜೆಬಿಯ ಮಾಜಿ ಮುಖ್ಯ ಎಂಜಿನಿಯರ್ ಜಗದೀಶ್ ಕುಮಾರ್ ಅರೋರಾ, ಗುತ್ತಿಗೆದಾರ ಅನಿಲ್ ಕುಮಾರ್ ಅಗರ್ವಾಲ್, ಎನ್ಬಿಸಿಸಿಯ ಮಾಜಿ ಜನರಲ್ ಮ್ಯಾನೇಜರ್ ಡಿ.ಕೆ. ಮಿತ್ತಲ್, ತೇಜಿಂದರ್ ಸಿಂಗ್ ಹಾಗೂ ಎನ್ಕೆಜಿ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಅನ್ನು ಆರೋಪಿಗಳು ಎಂದು ಹೆಸರಿಸಲಾಗಿದೆ.
ಡಿಜೆಬಿ ನೀಡಿದ ಗುತ್ತಿಗೆಯಲ್ಲಿ ಭ್ರಷ್ಟಾಚಾರದಿಂದ ಉತ್ಪತ್ತಿಯಾದ ಲಂಚದ ಹಣವನ್ನು ದಿಲ್ಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷದ ಚುನಾವಣಾ ನಿಧಿಗೆ ಹಸ್ತಾಂತರಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.
ಈ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಕೂಡ ಸಮನ್ಸ್ ಜಾರಿಗೊಳಿಸಲಾಗಿದೆ. ಆದರೆ, ಅವರು ಇದುವರೆಗೆ ಹಾಜರಾಗಿಲ್ಲ.