ದಿಲ್ಲಿಯ ಪತ್ರಕರ್ತೆ ಖುಷ್ಬೂ ಅಖ್ತರ್ ನಿವಾಸ ಬೆಂಕಿಗಾಹುತಿ: ದುಷ್ಕರ್ಮಿಗಳ ಕೃತ್ಯದ ಶಂಕೆ
Photo: thewire.in
ಹೊಸದಿಲ್ಲಿ: ಜನಪ್ರಿಯ ಯೂಟ್ಯೂಬ್ ವಾಹಿನಿ ನಡೆಸುತ್ತಿರುವ ದಿಲ್ಲಿ ಮೂಲದ ಪತ್ರಕರ್ತೆ ಖುಷ್ಬೂ ಅಖ್ತರ್ ನಿವಾಸವು ಬೆಂಕಿಗಾಹುತಿಯಾಗಿದೆ. ದುಷ್ಕರ್ಮಿಗಳು ತನ್ನ ನಿವಾಸಕ್ಕೆ ಬೆಂಕಿ ಹಚ್ಚಿ, ಖುರಾನ್ ಹಾಗೂ ರಾಮಾಯಣ ಕೃತಿಗಳ ಪ್ರತಿಗಳು ಸೇರಿದಂತೆ ತನ್ನ ಹಲವಾರು ಪುಸ್ತಕಗಳನ್ನು ಸುಟ್ಟಿದ್ದಾರೆ ಎಂದು ಆಕೆ ಆರೋಪಿಸಿದ್ದಾರೆ ಎಂದು thewire.in ವರದಿ ಮಾಡಿದೆ.
‘ಪಲ್ ಪಲ್ ನ್ಯೂಸ್’ ಎಂಬ ಯೂಟ್ಯೂಬ್ ವಾಹಿನಿಯನ್ನು ನಡೆಸುತ್ತಿರುವ ಖುಷ್ಬೂ ಅಖ್ತರ್ ಈವರೆಗೆ ಯಾವುದೇ ದುಷ್ಕರ್ಮಿಯನ್ನು ಹೆಸರಿಸದಿದ್ದರೂ, ಮುಸ್ಲಿಮರು ಹಾಗೂ ದಮನಿತ ಸಮುದಾಯಗಳ ಪರವಾಗಿ ದನಿಯೆತ್ತಿರುವುದೂ ಸೇರಿದಂತೆ ನನ್ನ ಪತ್ರಿಕೋದ್ಯಮದ ಕೆಲಸಗಳಿಗಾಗಿ ನನ್ನನ್ನು ಗುರಿಯಾಗಿಸಿರುವ ಸಾಧ್ಯತೆ ಇದೆ ಎಂದು ಶಂಕಿಸಿದ್ದಾರೆ.
ಬುಧವಾರ (ಆಗಸ್ಟ್ 30) ಈ ಘಟನೆ ನಡೆದಿದ್ದು, ಖುಷ್ಬೂ ಅಖ್ತರ್ ಹಾಗೂ ಆಕೆಯ ಕುಟುಂಬವು ಒಂದು ವರ್ಷದ ಹಿಂದೆಯೇ ನಗರದಲ್ಲಿನ ಮತ್ತೊಂದು ಮನೆಗೆ ಸ್ಥಳಾಂತರಗೊಂಡಿರುವುರಿಂದ ದಾಳಿಯ ಸಂದರ್ಭದಲ್ಲಿ ಬೆಂಕಿಗಾಹುತಿಯಾಗಿರುವ ಮನೆಯಲ್ಲಿರಲಿಲ್ಲ ಎಂದು ಹೇಳಲಾಗಿದೆ.
ಹೀಗಿದ್ದೂ, ತಮಗೆ ಸೇರಿರುವ ಹಲವಾರು ವಸ್ತುಗಳನ್ನಿಟ್ಟಿರುವ ಹಳೆಯ ಮನೆಗೆ ಆಗಾಗ ಭೇಟಿ ನೀಡುತ್ತಿದ್ದ ಅವರು, ತಮ್ಮ ನೆರೆಹೊರೆಯವರನ್ನು ಭೇಟಿಯಾಗುತ್ತಿದ್ದರು ಎಂದು ಹೇಳಲಾಗಿದೆ.
ಬುಧವಾರ ಖುಷ್ಬೂ ಆಖ್ತರ್ ನೀಡಿರುವ ದೂರನ್ನು ಆಧರಿಸಿ ಸುಲ್ತಾನ್ ಪುರಿ ಠಾಣೆಯ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣವನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 436 (ಬೆಂಕಿ ಅಥವಾ ಸ್ಫೋಟಕಗಳನ್ನು ಬಳಸಿ ಮನೆಯನ್ನು ನಾಶಪಡಿಸುವ ದುಷ್ಕೃತ್ಯ) ಅಡಿ ದಾಖಲಿಸಿಕೊಳ್ಳಲಾಗಿದೆ.
ಈ ನಡುವೆ, ತಾನು ನೆಲೆಸಿದ್ದ ನಿವಾಸದಲ್ಲಿ ಯಾವುದೇ ಶಾರ್ಟ್ ಸರ್ಕ್ಯೂಟ್ ಆಗಿರುವ ಸಾಧ್ಯತೆಯನ್ನು ತಳ್ಳಿ ಹಾಕಿರುವ ಖುಷ್ಬೂ ಅಖ್ತರ್, ಅಂತಹ ಅವಘಡಗಳನ್ನು ತಪ್ಪಿಸಲು ನಮ್ಮ ಕುಟುಂಬವು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿತ್ತು ಎಂದು ಹೇಳಿಕೊಂಡಿದ್ದಾರೆ.