ದಿಲ್ಲಿ ವಿಧಾನ ಸಭೆ ಚುನಾವಣೆ | ಬಿಜೆಪಿ ವರಿಷ್ಠ ವಿರೇಂದ್ರ ಸಚ್ದೇವ್ ಸ್ಪರ್ಧೆ ಇಲ್ಲ
ವಿರೇಂದ್ರ ಸಚ್ದೇವ್ | PC : PTI
ಹೊಸದಿಲ್ಲಿ : ಮುಂಬರುವ ದಿಲ್ಲಿ ವಿಧಾನ ಸಭಾ ಚುನಾವಣೆಯಲ್ಲಿ ದಿಲ್ಲಿ ಬಿಜೆಪಿ ಅಧ್ಯಕ್ಷ ವಿರೇಂದ್ರ ಸಚ್ದೇವ್ ಸ್ಪರ್ಧಿಸುವುದಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಸಚ್ದೇವ್ ಅವರು ತನ್ನ ನಿರ್ಧಾರವನ್ನು ಬಿಜೆಪಿಯ ನಾಯಕತ್ವಕ್ಕೆ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಇದರ ಬದಲಿಗೆ ತಾನು ದಿಲ್ಲಿಯ ಎಲ್ಲಾ 70 ಕ್ಷೇತ್ರಗಳಲ್ಲಿ ಪಕ್ಷದ ಯಶಸ್ಸನ್ನು ಖಾತರಿಪಡಿಸುವಲ್ಲಿ ಗಮನ ನೀಡುತ್ತೇನೆ ಎಂದು ಅವರು ಹೇಳಿದ್ದಾರೆ.
ಸಚ್ದೇವ್ ಅವರ ನಿರ್ಧಾರಕ್ಕೆ ಬಿಜೆಪಿಯ ಹೈಕಮಾಂಡ್ ಒಪ್ಪಿಗೆ ನೀಡಿದೆ ಎಂದು ಮೂಲಗಳು ತಿಳಿಸಿವೆ. ಇತ್ತೀಚೆಗೆ ಸಚ್ದೇವ್ ಅವರು ದಿಲ್ಲಿಯಲ್ಲಿ ಪಕ್ಷದ ಚುನಾವಣಾ ತಂತ್ರಗಾರಿಕೆಯ ಕುರಿತು ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಚರ್ಚೆ ನಡೆಸಿದ್ದರು.
ಗುರುವಾರ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಚ್ದೇವ್, ತನ್ನ ನಿಲುವನ್ನು ದೃಢಪಡಿಸಿದ್ದರು. ತಾನು ಕೃಷ್ಣನಗರ ಅಥವಾ ವಿಶ್ವಾಸ್ ನಗರ ವಿಧಾನ ಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಬಹುದು ಎಂಬ ವದಂತಿಯನ್ನು ನಿರಾಕರಿಸಿದ್ದರು.