ದಿಲ್ಲಿಯ ಎಲ್ಜಿ ಬಿಜೆಪಿ ಪ್ರತಿನಿಧಿಯಂತೆ ಕೆಲಸ ಮಾಡುತ್ತಿದ್ದಾರೆ: ಸಿಎಂ ಆತಿಷಿ
ಆತಿಷಿ , ವಿ.ಕೆ.ಸಕ್ಸೇನಾ | PTI
ಹೊಸದಿಲ್ಲಿ : ದಿಲ್ಲಿಯ ಲೆಫ್ಟಿನಂಟ್ ಗವರ್ನರ್(ಎಲ್ಜಿ) ವಿ.ಕೆ.ಸಕ್ಸೇನಾ ಅವರು ಸೋಮವಾರ ಮುಖ್ಯಮಂತ್ರಿ ಆತಿಷಿ ಅವರಿಗೆ ಬರೆದಿದ್ದ ಪತ್ರವು ರಾಜಕೀಯ ವಿವಾದವನ್ನು ಹುಟ್ಟುಹಾಕಿದೆ. ಆತಿಷಿಯವರನ್ನು ‘ಹಂಗಾಮಿ ಮುಖ್ಯಮಂತ್ರಿ’ ಎಂದು ಕರೆದಿದ್ದಕ್ಕಾಗಿ ಆಪ್ ವರಿಷ್ಠ ಅರವಿಂದ ಕೇಜ್ರಿವಾಲ್ರನ್ನು ಸಕ್ಸೇನಾ ಪತ್ರದಲ್ಲಿ ಟೀಕಿಸಿದ್ದರು. ಇದಕ್ಕೆ ಮಂಗಳವಾರ ಪ್ರತಿಕ್ರಿಯಿಸಿರುವ ಆತಿಷಿ,‘ಚಿಲ್ಲರೆ ರಾಜಕೀಯ’ ಮಾಡುವುದನ್ನು ಬಿಡಿ ಎಂದು ಸಕ್ಸೇನಾರಿಗೆ ಕಿವಿಮಾತು ಹೇಳಿದ್ದಾರೆ.
ಕೇಜ್ರಿವಾಲ್ ಆತಿಷಿಯವರನ್ನು ‘ಹಂಗಾಮಿ ಮುಖ್ಯಮಂತ್ರಿ’ ಎಂದು ಕರೆದಿದ್ದಾರೆ ಎಂದು ಹೊಸವರ್ಷಕ್ಕಾಗಿ ತನ್ನ ಪತ್ರದಲ್ಲಿ ಆರೋಪಿಸಿದ್ದ ಸಕ್ಸೇನಾ,‘ಇದು ನಿಮಗೆ ಮಾತ್ರವಲ್ಲ,ನಿಮ್ಮನ್ನು ನೇಮಕಗೊಳಿಸಿದ ಭಾರತದ ರಾಷ್ಟ್ರಪತಿ ಮತ್ತು ಅವರ ಪ್ರತಿನಿಧಿಯಾಗಿ ನನಗೂ ಅವಮಾನವಾಗಿದೆ’ ಎಂದು ಹೇಳಿದ್ದರು.
ಕೇಜ್ರಿವಾಲ್ ಹೇಳಿಕೆಗಳು ಸಂವಿಧಾನದಲ್ಲಿ ಪ್ರತಿಪಾದಿಸಲಾಗಿರುವ ಪ್ರಜಾಪ್ರಭುತ್ವದ ತತ್ವಗಳು ಮತ್ತು ಮೌಲ್ಯಗಳಿಗೆ ಖಂಡನೀಯ ಅಗೌರವವನ್ನು ತೋರಿಸಿವೆ ಎಂದೂ ಹೇಳಿದ್ದ ಸಕ್ಸೇನಾ, ಕೇಜ್ರಿವಾಲ್ ಎಲ್ಲಿ ಮತ್ತು ಯಾವಾಗ ಈ ಹೇಳಿಕೆಗಳನ್ನು ನೀಡಿದ್ದರು ಎನ್ನುವುದನ್ನು ಉಲ್ಲೇಖಿಸಿರಲಿಲ್ಲ.
ದಿಲ್ಲಿ ವಿಧಾನಸಭಾ ಚುನಾವಣೆಗಳಿಗೆ ಮುನ್ನ ಆಡಳಿತಾರೂಢ ಆಪ್ ಮಹಿಳೆಯರು ಮತ್ತು ಹಿರಿಯ ನಾಗರಿಕರಿಗಾಗಿ ಪ್ರಕಟಿಸಿರುವ ಯೋಜನೆಗಳನ್ನು ತನ್ನ ಪತ್ರದಲ್ಲಿ ಪ್ರಸ್ತಾವಿಸಿದ್ದ ಸಕ್ಸೇನಾ, ಅನಧಿಕೃತ ಪ್ರಕಟಣೆಗಳು ಮುಖ್ಯಮಂತ್ರಿ ಯನ್ನು ಕಡೆಗಣಿಸಿವೆ ಎಂದೂ ಹೇಳಿದ್ದರು.
ಚಿಲ್ಲರೆ ರಾಜಕೀಯ ಮಾಡುವುದನ್ನು ಬಿಡಿ ಎಂದು ಮಂಗಳವಾರ ಪತ್ರದಲ್ಲಿ ಸಕ್ಸೇನಾರಿಗೆ ತಿರುಗೇಟು ನೀಡಿರುವ ಆತಿಷಿ, ಎಲ್ಜಿ ಈಗ ಬಿಜೆಪಿಯ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ ಎಂದಿದ್ದಾರೆ. ಆಪ್ ಈ ಪತ್ರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದೆ.
ಕೇಜ್ರಿವಾಲ್ ತನ್ನನ್ನು ‘ಹಂಗಾಮಿ ಮುಖ್ಯಮಂತ್ರಿ’ ಎಂದು ಕರೆದಿದ್ದಾರೆ ಎಂಬ ಆರೋಪ ಕುರಿತಂತೆ ಆತಿಷಿ, ‘ಅದು ಸರಕಾರದ ಎಲ್ಲ ಚುನಾಯಿತ ಪ್ರತಿನಿಧಿಗಳು ವಾಸ್ತವದಲ್ಲಿ ಹಂಗಾಮಿಯಾಗಿದ್ದಾರೆ ಮತ್ತು ತಮ್ಮ ಅವಧಿ ಮುಗಿಯುವವರೆಗೆ ಮಾತ್ರ ಅಧಿಕಾರದಲ್ಲಿರುತ್ತಾರೆ ಎಂಬ ನಮ್ಮ ದೇಶದ ಪ್ರಜಾಸತ್ತಾತ್ಮಕ ತತ್ವಗಳಿಗೆ ನಿದರ್ಶನವಾಗಿದೆ’ ಎಂದು ಹೇಳಿದರು.
ಕ್ರಿಯಾಶೀಲ ಪ್ರಜಾಪ್ರಭುತ್ವದ ಈ ವಾಸ್ತವವನ್ನು ಎತ್ತಿ ತೋರಿಸುವ ಯಾವುದೇ ಹೇಳಿಕೆಯಲ್ಲಿಯೂ ನೀವು ತಪ್ಪು ಹುಡುಕುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದೂ ಕುಟುಕಿರುವ ಆತಿಷಿ,‘ಮಹಿಳಾ ಸಮ್ಮಾನ್ ಯೋಜನೆಗೆ ಅಡ್ಡಿಯು ಲೆಫ್ಟಿನಂಟ್ ಗವರ್ನರ್ ಹುದ್ದೆಯ ರಾಜಕೀಕರಣದ ಸ್ಪಷ್ಟ ಸಾಕ್ಷಿಯಾಗಿದೆ. ಈ ಯೋಜನೆಯನ್ನು ಕೆಡಿಸುವ ಮತ್ತು ಅದಕ್ಕೆ ತೊಡಕುಗಳನ್ನು ಸೃಷ್ಟಿಸುವ ನಿಮ್ಮ ಇತ್ತೀಚಿನ ಕ್ರಮಗಳು ಓರ್ವ ಮಹಿಳೆಯಾಗಿ ನನಗೆ ನೋವನ್ನುಂಟು ಮಾಡಿವೆ’ ಎಂದಿದ್ದಾರೆ.