ದಿಲ್ಲಿ ಅಬಕಾರಿ ನೀತಿ ಹಗರಣ: BRS ನಾಯಕಿ ಕೆ.ಕವಿತಾಗೆ ಜಾಮೀನು ನಿರಾಕರಣೆ
ಕೆ. ಕವಿತಾ (PTI)
ಹೊಸದಿಲ್ಲಿ: ದಿಲ್ಲಿ ಅಬಕಾರಿ ನೀತಿಗೆ ಸಂಬಂಧಿಸಿದಂತೆ ದಾಖಲಾಗಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದಿಲ್ಲಿಯ ನ್ಯಾಯಾಲಯವೊಂದು BRS ನಾಯಕಿ ಕೆ. ಕವಿತಾಗೆ ಮಧ್ಯಂತರ ಜಾಮೀನು ನಿರಾಕರಿಸಿದೆ.
ಕೆ.ಕವಿತಾರ ಅರ್ಜಿಯನ್ನು ವಜಾಗೊಳಿಸಿದ ವಿಶೇಷ ನ್ಯಾಯಾಧೀಶೆ ಕಾವೇರಿ ಬವೇಜಾ, ಈ ಹಂತವು ಅವರಿಗೆ ಮಧ್ಯಂತರ ಜಾಮೀನು ನೀಡಲು ಸೂಕ್ತವಾಗಿಲ್ಲ ಎಂದು ಅಭಿಪ್ರಾಯ ಪಟ್ಟರು.
ಮಧ್ಯಂತರ ಜಾಮೀನಿಗಾಗಿ ನ್ಯಾಯಾಲಯದ ಮೊರೆ ಹೋಗಿದ್ದ ಕವಿತಾ, ನನ್ನ 16 ವರ್ಷದ ಪುತ್ರನಿಗೆ ಪರೀಕ್ಷೆಗಳಿದ್ದು, ಆತನಿಗೆ ತಾಯಿಯ ನೈತಿಕ ಹಾಗೂ ಭಾವನಾತ್ಮಕ ಬೆಂಬಲದ ಅಗತ್ಯವಿದೆ ಎಂದು ಕೋರಿಕೊಂಡಿದ್ದರು.
ಆದರೆ, ಕವಿತಾರ ಮನವಿಯನ್ನು ವಿರೋಧಿಸಿದ ಜಾರಿ ನಿರ್ದೇಶನಾಲಯವು, ಕೆ.ಕವಿತಾ ಸಾಕ್ಷ್ಯಾಧಾರಗಳನ್ನು ನಾಶಗೊಳಿಸಿದ್ದು, ಪ್ರಕರಣದಲ್ಲಿನ ಸಾಕ್ಷಿಗಳ ಮೇಲೆ ಪ್ರಭಾವ ಬೀರಿದ್ದಾರೆ ಎಂದು ಆರೋಪಿಸಿತು.
ರಾಷ್ಟ್ರ ರಾಜಧಾನಿಯಲ್ಲಿ ಮದ್ಯ ಪರವಾನಗಿಯ ದೊಡ್ಡ ಪಾಲನ್ನು ಪಡೆಯಲು ದಿಲ್ಲಿಯ ಆಡಳಿತಾರೂಢ ಆಪ್ ಪಕ್ಷಕ್ಕೆ ರೂ. 100 ಕೋಟಿ ಕಿಕ್ ಬ್ಯಾಕ್ ನೀಡಿರುವ ದಕ್ಷಿಣದ ಗುಂಪಿನಲ್ಲಿ ಕೆ.ಕವಿತಾ ಪ್ರಮುಖ ಸದಸ್ಯರಾಗಿದ್ದಾರೆ ಎಂದು ಜಾರಿ ನಿರ್ದೇಶನಾಲಯವು ಆಪಾದಿಸಿತು.
BRS ಬೆಂಬಲಿಗರ ಭಾರಿ ಪ್ರತಿಭಟನೆಯ ನಡುವೆ ಮಾರ್ಚ್ 15ರಂದು 46 ವರ್ಷದ ಕೆ.ಕವಿತಾ ಅವರನ್ನು ಬಂಜಾರ ಹಿಲ್ಸ್ ನಲ್ಲಿರುವ ಅವರ ನಿವಾಸದಿಂದ ಬಂಧಿಸಲಾಗಿತ್ತು.
ಮರುದಿನ ಅವರನ್ನು ಏಳು ದಿನಗಳ ಕಾಲ ಜಾರಿ ನಿರ್ದೇಶನಾಲಯದ ವಶಕ್ಕೆ ಒಪ್ಪಿಸಲಾಗಿತ್ತು. ನಂತರ ಅವರ ಕಸ್ಟಡಿ ವಿಚಾರಣಾ ಅವಧಿಯನ್ನು ಮತ್ತೆ ಮೂರು ದಿನಗಳ ಕಾಲ ವಿಸ್ತರಿಸಲಾಗಿತ್ತು. ಕಳೆದ ಮಂಗಳವಾರ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.