ದಿಲ್ಲಿ ಮದ್ಯ ನೀತಿ ಪ್ರಕರಣ: ಆಪ್, ಕೇಜ್ರಿವಾಲ್ ವಿರುದ್ಧ ಪೂರಕ ಚಾರ್ಜ್ ಶೀಟ್ ಸಲ್ಲಿಸಿದ ಈಡಿ
ಅರವಿಂದ ಕೇಜ್ರಿವಾಲ್ | PC : PTI
ಹೊಸದಿಲ್ಲಿ: ದಿಲ್ಲಿ ಮದ್ಯ ನೀತಿ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಆಮ್ ಆದ್ಮಿ ಪಕ್ಷವನ್ನು ಆರೋಪಿಗಳಾಗಿ ಜಾರಿ ನಿರ್ದೇಶನಾಲಯವು ಶುಕ್ರವಾರ ಸಲ್ಲಿಸಿದ ಪೂರಕ ದೋಷಾರೋಪ ಪಟ್ಟಿಯಲ್ಲಿ ಹೆಸರಿಸಿದೆ.
ದಿಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾದ ದೋಷಾರೋಪ ಪಟ್ಟಿಯಲ್ಲಿ ಇದೇ ಮೊದಲ ಬಾರಿಗೆ ಈ.ಡಿ.ಯು ಕೇಜ್ರಿವಾಲ್ ಹಾಗೂ ಆಪ್ ಪಕ್ಷವನ್ನು ಆರೋಪಿಗಳಾಗಿ ಹೆಸರಿಸಿದೆ. ಕ್ರಿಮಿನಲ್ ಪ್ರಕರಣದಲ್ಲಿ ರಾಜಕೀಯ ಪಕ್ಷವೊಂದನ್ನು ಆರೋಪಿಯಾಗಿ ಹೆಸರಿಸಿರುವುದು ಭಾರತದಲ್ಲಿ ಇದು ಮೊದಲನೆ ಸಲವಾಗಿದೆ.
ಇದೀಗ ರದ್ದುಗೊಳಿಸಲಾಗಿರುವ ದಿಲ್ಲಿ ಮದ್ಯ ನೀತಿಗೆ ಸಂಬಂಧಿಸಿದ ಕಪ್ಪುಹಣ ಬಿಳುಪು ಪ್ರಕರಣದಲ್ಲಿ ಸುಪ್ರೀಂಕೋರ್ಟ್, ಕೇಜ್ರಿವಾಲ್ ಅವರಿಗೆ ಜೂನ್ 1ರವರೆಗೆ ಮಧ್ಯಂತರ ಜಾಮೀನು ನೀಡಿದೆ.
ದಕ್ಷಿಣ ಭಾರತದ ಮದ್ಯ ಲಾಬಿಗೆ ಭಾರೀ ಲಾಭವನ್ನು ಮಾಡಿಕೊಡುವಂತಹ ಅಬಕಾರಿ ನೀತಿಯನ್ನು ರೂಪಿಸುವಲ್ಲಿ ಕೇಜ್ರಿವಾಲ್ ನೇರವಾಗಿ ಶಾಮೀಲಾಗಿದ್ದರು ಎಂದು ಜಾರಿ ನಿರ್ದೇಶನಾಲಯ ಆಪಾದಿಸಿತ್ತು.
2021ರಲ್ಲಿ ಆಮ್ ಆದ್ಮಿ ಪಕ್ಷವು ರೂಪಿಸಿದ್ದ ಮದ್ಯನೀತಿಯು ಸಗಟು ಮದ್ಯ ಮಾರಾಟಗಾರರಿಗೆ ಶೇ.12 ಲಾಭಾಂಶ ಹಾಗೂ ರಿಟೇಲರ್ಗಳಿಗೆ ಶೇ.185ರಷ್ಟು ಲಾಭಾಂಶ ದೊರೆಯುವುದನ್ನು ಖಾತರಿಪಡಿಸಿತ್ತು.
ಸೌತ್ ಗ್ರೂಪ್ ಎಂದು ಕರೆಯಲ್ಪಡುತ್ತಿದ್ದ ಮದ್ಯ ಮಾರಾಟ ಲಾಬಿಯ ಸದಸ್ಯರು ಉದ್ಯಮಿ ವಿಜಯ್ ನಾಯರ್ ಮೂಲಕ ಆಮ್ ಆದ್ಮಿ ಪಕ್ಷದ ನಾಯಕರಿಗೆ 100 ಕೋಟಿ ರೂ. ಲಂಚ ನೀಡಿದ್ದರು ಎಂದು ಜಾರಿ ನಿರ್ದೇಶನಾಲಯ ಆಪಾದಿಸಿತ್ತು.